ಬೆಂಗಳೂರು: ''ಮೆಟ್ರೋ ದರ ಏರಿಕೆಗೆ ರಾಜ್ಯ ಸರ್ಕಾರ ಕಾರಣ ಎಂದು ಕೈ ತೋರಿಸಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಇದರಿಂದ ಜನಕ್ಕೆ ಹೊರೆ ಆಗುತ್ತದೆ. ನಮ್ಮ ಮೆಟ್ರೋಗೂ ಕೇಂದ್ರ ಸರ್ಕಾರ ಸಹಾಯಧನ ನೀಡಲಿ'' ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ವಿಧಾನಸೌಧದಲ್ಲಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ''ನಷ್ಟ ಆದರೂ ನಾವು ರಸ್ತೆ ಸಾರಿಗೆ ನಿಗಮಗಳಿಗೆ ಸಬ್ಸಿಡಿ ಕೊಡುತ್ತಿದ್ದೇವೆ. ಅದೇ ರೀತಿ ನಮ್ಮ ಮೆಟ್ರೋಗೂ ಕೇಂದ್ರ ಸರ್ಕಾರ ಸಬ್ಸಿಡಿ ಕೊಡಲಿ. ಬೇರೆ ರಾಜ್ಯಗಳ ಮೆಟ್ರೋಗೂ ಸಬ್ಸಿಡಿ ನೀಡಲಿ. ನಾನು ಬೆಲೆ ಏರಿಕೆ ಬಗ್ಗೆ ರಾಜ್ಯ ಸರ್ಕಾರದ ಪಾತ್ರ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೇನೆ. ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ನರೇಂದ್ರ ಮೋದಿ ಅವರಿಗೆ ಕೇಳಲು ಬಿಜೆಪಿ ಅವರಿಗೆ ಧಮ್ಮು ಇಲ್ಲ'' ಎಂದು ಟೀಕಿಸಿದರು.
ಜೋಶಿ, ಬೊಮ್ಮಾಯಿ ಸುಳ್ಳು ಹೇಳುತ್ತಾರೆ : ''ಬಿಜೆಪಿಯವರು ನಾವೇ ಮೆಟ್ರೋ ತಂದಿದ್ದು ಎಂದು ಫೋಸ್ ಕೊಡುತ್ತಾರೆ. ಪ್ರಲ್ಹಾದ್ ಜೋಶಿ ನಾಲ್ಕೈದು ಬಾರಿ ಎಂಪಿ, ಸಚಿವರಾಗಿದ್ದಾರೆ. ಅವರೂ ಸುಳ್ಳು ಹೇಳುತ್ತಾರೆ. ಬೊಮ್ಮಾಯಿ ಸಿಎಂ ಆದವರು, ಅವರೂ ಹಸಿ ಸುಳ್ಳು ಹೇಳುತ್ತಾರೆ ಅಂದರೆ ರಾಜ್ಯದಲ್ಲಿ ಏನೇನು ಅನಾಹುತ ಆಗುತ್ತೆ ಅಂತ ಗೊತ್ತಿಲ್ಲ. ದೇಶದಲ್ಲಿನ ಮೆಟ್ರೋ ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಬರುತ್ತದೆ. ಸುಳ್ಳು ಹೇಳುವ ಜನರೆಲ್ಲಾ ಪಕ್ಷ ಕಟ್ಟಿಕೊಂಡಿದ್ದಾರೆ, ಅದು ಬಿಜೆಪಿ. ಬಿಜೆಪಿ ರಾಜ್ಯ ನಾಯಕರು ಬಿಡಿ, ಕೇಂದ್ರ ರೈಲ್ವೆ ಮಂತ್ರಿಗಳನ್ನು ಕರೆಯಿಸಿ ಸುಳ್ಳು ಹೇಳಿಸಿದ್ದಾರೆ. ಮೆಟ್ರೋ ದರ ಏರಿಕೆ ಮಾಡಿದ್ದು ರಾಜ್ಯ ಸರ್ಕಾರ ಅಂತ ಸುಳ್ಳು ಹೇಳಿಸಿದ್ದಾರೆ'' ಎಂದು ವಾಗ್ದಾಳಿ ನಡೆಸಿದರು.
ದರ ನಿಗದಿಗೆ ಸಮಿತಿ ರಚನೆ ಮಾಡುವುದೇ ಕೇಂದ್ರ : ''ಅಶ್ವಿನಿ ವೈಶ್ಣವ್ ಕೂಡ ಅಜ್ಞಾನಿಗಳು ಅಂತ ನನಗೆ ಅನ್ನಿಸುತ್ತಿದೆ. ಕೇಂದ್ರ ಸಚಿವರಿಗೆ ಸರಿಯಾದ ಮಾಹಿತಿ ಇಲ್ಲ. ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್ ಬುದ್ಧಿವಂತ ನಾಯಕರಿದ್ದಾರೆ. ಮೆಟ್ರೋ ಕಾಯ್ದೆ 2002ರ ಸೆಕ್ಷನ್ 34ರ ಪ್ರಕಾರ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸುವುದು. ದರ ನಿಗದಿಗೆ ಸಮಿತಿ ರಚನೆ ಮಾಡುವುದೇ ಕೇಂದ್ರ ಸರ್ಕಾರ. ಈ ಸಮಿತಿಗೆ ಹೈಕೋರ್ಟ್ ನಿವೃತ್ತ ಜಡ್ಜ್ರನ್ನು ನೇಮಕ ಮಾಡುತ್ತಾರೆ. ಅದರಲ್ಲಿ ಒಬ್ಬ ಜಡ್ಜ್, ಕೇಂದ್ರದ ಒಬ್ಬ ಸದಸ್ಯರು, ರಾಜ್ಯದ ಒಬ್ಬ ಸದಸ್ಯರು ಇರುತ್ತಾರೆ. ಈ ಸಮಿತಿ ಎಲ್ಲರ ಅಭಿಪ್ರಾಯ ತಗೊಂಡು ವರದಿ ತಯಾರು ಮಾಡುತ್ತದೆ. ಈ ವರದಿಯನ್ನು ಕೇಂದ್ರದ ಮೆಟ್ರೋ ಮಂಡಳಿಗೆ ಕೊಡುತ್ತಾರೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯದ ಕಾರ್ಯದರ್ಶಿಗಳು ದರ ಏರಿಕೆ ಮಾಡುತ್ತಾರೆ'' ಎಂದು ಸ್ಪಷ್ಟಪಡಿಸಿದರು.
''ಮೆಟ್ರೋ ದರ ಏರಿಕೆಗೂ, ರಾಜ್ಯಕ್ಕೂ ಸಂಬಂಧ ಇಲ್ಲ. ಮೆಟ್ರೋ ಇರುವ ಎಲ್ಲಾ ರಾಜ್ಯಗಳು ದರ ಏರಿಕೆ ಮಾಡಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಸಲ್ಲಿಸುತ್ತಾರೆ. ಈ ಪತ್ರವನ್ನು ಆಧರಿಸಿ ಕೇಂದ್ರ ಸರ್ಕಾರವು ದರ ಏರಿಕೆ ಮಾಡಲು ಸಮಿತಿಯನ್ನು ರಚಿಸುತ್ತದೆ. ಇದೇ ರೀತಿ ಬೆಂಗಳೂರು ನಮ್ಮ ಮೆಟ್ರೋದವರು ಸಹ ಪತ್ರ ಬರೆದಿದ್ದಾರೆ. ಅದರಂತೆ, ದಿನಾಂಕ 07.09.2024ರಂದು ಕೇಂದ್ರ ಸರ್ಕಾರದ ದರ ಏರಿಕೆ ಕುರಿತು ಸಮಿತಿಯನ್ನು ರಚಿಸಿದೆ. ಕೇಂದ್ರ ಸರ್ಕಾರ ರಚಿಸಿರುವ ಸಮಿತಿಯ ಅಧ್ಯಕ್ಷರಾಗಿ ಮದ್ರಾಸ್ ಹೈಕೋರ್ಟ್ನ ಹಿಂದಿನ ನ್ಯಾಯಮೂರ್ತಿಗಳಾದ ಆರ್. ತಾರಿಣಿ ಅವರಿದ್ದಾರೆ. ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಸತೀಂದರ್ ಪಾಲ್ ಸಿಂಗ್, ರಾಜ್ಯದ ಪ್ರತಿನಿಧಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ರಮಣ ರೆಡ್ಡಿ ಸಮಿತಿಯ ಸದಸ್ಯರಾಗಿದ್ದಾರೆ'' ಎಂದು ವಿವರಿಸಿದರು.
ಇದನ್ನೂ ಓದಿ: ಸಚಿವ ರಾಜಣ್ಣ ನಮ್ಮ ಪಕ್ಷದವರಲ್ಲ, ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ: ವಿಜಯೇಂದ್ರ
''ಮೂರು ಜನರ ಸಮಿತಿ ಕೆಇಆರ್ಸಿ ಮಾದರಿಯಲ್ಲಿ ಸಾರ್ವಜನಿಕರ ಅಭಿಪ್ರಾಯ ಪಡೆಯುತ್ತದೆ. ಬಳಿಕ ಸಮಿತಿ ದರ ನಿಗದಿ ಮಾಡುತ್ತದೆ. ಸಮಿತಿಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಡಲ್ಲ. ಇದನ್ನು ಕೇಂದ್ರ ಮೆಟ್ರೋ ಮಂಡಳಿಗೆ ಕೊಡುತ್ತಾರೆ. ಅದರ ಅಧ್ಯಕ್ಷ ಕೇಂದ್ರದ ಯುಡಿ ಕಾರ್ಯದರ್ಶಿಯಾಗಿರುತ್ತಾರೆ. ಅವರು ದರ ನಿರ್ಧಾರ ಮಾಡುತ್ತಾರೆ. ಸಿಎಂ ಜನರ ಹಿತದೃಷ್ಟಿಯಿಂದ ದರ ಕಡಿಮೆ ಮಾಡಿ ಅಂತ ಪತ್ರ ಬರೆದರು. ಬಿಎಂಆರ್ಸಿಎಲ್ ಎಂಡಿ ನಗರಾಭಿವೃದ್ಧಿ ಕಾರ್ಯದರ್ಶಿ ಜೊತೆ ಮಾತನಾಡಿ ದರ ಕಡಿಮೆ ಮಾಡಿಸಿದ್ದಾರೆ'' ಎಂದರು.
ಬಿಜೆಪಿ ಸುಳ್ಳು ಹೇಳುತ್ತಿದೆ : ''ಮೂರು ಬಿಟ್ಟವರು ಊರಿಗೆ ದೊಡ್ಡವರು, ಅದಕ್ಕೆ ಬಿಜೆಪಿ ಸುಳ್ಳು ಹೇಳುತ್ತಿದೆ. ಏನಾದರೂ ಒಳ್ಳೆಯದು ಅದರೆ ಅದನ್ನು ನಾವು ಮಾಡಿದ್ದು ಎಂದು ಬಿಜೆಪಿಯವರು ಹೇಳುತ್ತಾರೆ. ಈ ತರದ ವಿಚಾರ ಅದರೆ ನಾವಲ್ಲ ಅನ್ನುತ್ತಾರೆ. ಮೆಟ್ರೋ ಕಾಯ್ದೆಯ ಅನುಸಾರ ಸಮಿತಿಯು ದರ ಏರಿಕೆ ಮಾಡಿದೆ'' ಎಂದರು.
ಇದನ್ನೂ ಓದಿ: ಮಾರ್ಚ್ 7ರಂದು 2025-26ನೇ ಸಾಲಿನ ಬಜೆಟ್ ಮಂಡನೆ : ಸಿಎಂ ಸಿದ್ದರಾಮಯ್ಯ