ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಎರಡೂವರೆ ವರ್ಷ ಕಳೆದಿದೆ. ದಿನಗಳು ಉರುಳುತ್ತಿದ್ದರೂ ನಟನ ನೆನಪು ಅಭಿಮಾನಿಗಳ ಮನದಲ್ಲಿ ಜೀವಂತವಾಗಿದೆ. ಅಪ್ಪು ಬದುಕಿದ್ದರೆ ಇಂದು 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ ವಿಧಿಯಾಟದಿದಂದಾಗಿ 46ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ್ದರು. ಅಪ್ಪು ಹುಟ್ಟಿದ ದಿನವನ್ನು ಸ್ಫೂರ್ತಿ ದಿನವೆಂದು ಆಚರಿಸಲಾಗುತ್ತಿದೆ.
ಅಪ್ಪು ಹುಟ್ಟುಹಬ್ಬದ ಅಂಗವಾಗಿ ಪವರ್ ಸ್ಟಾರ್ ಹಾಡಿರುವ ಹಾಡುಗಳ ಒಂದು ಮೆಲುಕು ನೋಟ ಇಲ್ಲಿದೆ. ಪುನೀತ್ ಚಿತ್ರ ಬಿಡುಗಡೆಯಾಗುತ್ತಿದೆ ಎಂದರೆ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರತನಕ ಎಲ್ಲರೂ ಕುಟುಂಬಸಮೇತರಾಗಿ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡುತ್ತಿದ್ದರು. ನಟನೆಯ ಜೊತೆಗೆ ಗಾಯಕರಾಗಿಯೂ ತಮ್ಮದೇ ರೀತಿಯ ಛಾಪು ಮೂಡಿಸಿದ್ದರು.
1975ರಲ್ಲಿ ಮೇರುನಟ ಡಾ.ರಾಜ್‌ಕುಮಾರ್ ಅವರ ಕೊನೆಯ ಮಗನಾಗಿ ಜನಿಸಿದ್ದ ಪುನೀತ್ ರಾಜ್‌ಕುಮಾರ್, ಆರು ತಿಂಗಳ ಮಗುವಾಗಿರುವಾಗಲೇ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಅಭಿನಯಿಸಿದ್ದರು. ನಂತರ 6 ವರ್ಷದವರಾಗಿದ್ದಾಗ ಭಾಗ್ಯವಂತ ಸಿನಿಮಾದಲ್ಲಿ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಡಿನಿಂದ ಹಿಡಿದು ನಮ್ಮ ಹುಡುಗರು ಚಿತ್ರದವರೆಗೂ ಸುಮಾರು 95 ಹಾಡುಗಳನ್ನು ಹಾಡಿದ್ದಾರೆ.
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ 1981ರಲ್ಲಿ ತೆರೆಕಂಡ ಭಾಗ್ಯವಂತ ಚಿತ್ರದಲ್ಲಿ ಮೊದಲ ಬಾರಿಗೆ ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ ಹಾಗೂ ಅಮ್ಮ ಸೀತಮ್ಮ ಎಂಬ ಹಾಡುಗಳನ್ನು ಹಾಡಿದ್ದರು. ಬಾನ ದಾರಿಯಲ್ಲಿ ಹಾಡು ಇಂದಿಗೂ ಚಿತ್ರ ಪ್ರೇಮಿಗಳ ಅತ್ಯುತ್ತಮ ಹಾಡು.
ರಾಜ್‌ಕುಮಾರ್ ಹಾಗೂ ಸರಿತಾ ಅಭಿನಯನದ 1982ರಲ್ಲಿ ತೆರೆಕಂಡ ಚಲಿಸುವ ಮೋಡಗಳು ಚಿತ್ರದಲ್ಲಿ ರಾಜನ್ ನಾಗೇಂದ್ರ ಸಂಗೀತ ನಿರ್ದೇಶನದಲ್ಲಿ ಕಾಣದಂತೆ ಮಾಯವಾದನು ನಮ್ಮ ಶಿವ ಹಾಡು ಇಂದಿಗೂ ಫೇಮಸ್ ಆಗಿದೆ. ಇದೇ ಹಾಡನ್ನು ಅಣ್ಣಾಬಾಂಡ್ ಚಿತ್ರದಲ್ಲಿ ರಿಮಿಕ್ಸ್ ಮಾಡಿ ಪುನೀತ್ ಹಾಡಿದ್ದರು.
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ 1983ರಲ್ಲಿ ಬಿಡುಗಡೆಯಾದ ಎರಡು ನಕ್ಷತ್ರಗಳು ಚಿತ್ರದಲ್ಲಿ ನನ್ನ ಉಡುಪು ನಿನ್ನದು ಸೇರಿ ಮೂರು ಹಾಡುಗಳನ್ನು ಹಾಡಿದ್ದಾರೆ. 1984ರಲ್ಲಿ ಯಾರಿವನು ಚಿತ್ರದಲ್ಲಿ ಕಣ್ಣಿಗೆ ಕಾಣುವ ದೇವರೆಂದರೆ ಅಮ್ಮನು ತಾನೇ ಹಾಡನ್ನು ಹಾಡಿ ಗಮನ ಸೆಳೆದಿದ್ದರು. ಚಿಕ್ಕವಯಸ್ಸಿನಲ್ಲೇ ರಾಷ್ಟ್ರ ಪ್ರಶಸ್ತಿ ಪಡೆಯಲು ಕಾರಣವಾದ ಬೆಟ್ಟದ ಹೂ ಚಿತ್ರದಲ್ಲಿ ಮಳೆಯೇ ಬರಲಿ ಬಿಸಿಲೇ ಇರಲಿ ಹಾಡಿಗೆ ಎಸ್ಪಿಬಿ ಜೊತೆಗೆ ಅಪ್ಪು ಧ್ವನಿಗೂಡಿಸಿದ್ದರು.
ಪುನೀತ್ ರಾಜ್‌ಕುಮಾರ್ ಪೂರ್ಣ ಪ್ರಮಾಣದಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿದ್ದ ಚಿತ್ರವೇ ಅಪ್ಪು. ಗುರುಕಿರಣ್ ಸಂಗೀತ ನಿರ್ದೇಶನದ ಉಪೇಂದ್ರ ಸಾಹಿತ್ಯದಲ್ಲಿ ತಾಲಿಬಾನ್ ಅಲ್ವೇ ಅಲ್ಲ ಎಂಬ ಹಾಡನ್ನು ಅಪ್ಪು ಹಾಡಿದ್ದರು.
ನಟನೆ ಜೊತೆಗೆ ಗಾಯನದ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಪರಮಾತ್ಮ ಇದಾದ ನಂತರ ಅಭಿ, ವೀರಕನ್ನಡಿಗ, ಮೌರ್ಯ, ಆಕಾಶ್, ನಮ್ಮ ಬಸವ ಚಿತ್ರಗಳಿಗೂ ಕಂಠದಾನ ಮಾಡಿದ್ದ ಅಪ್ಪು, ತಮ್ಮ ಚಿತ್ರಗಳಿಗೆ ಮಾತ್ರವಲ್ಲದೇ ಇತರೆ ಚಿತ್ರಗಳಿಗೂ ಹಾಡಿದ್ದರು. ರಿಷಿ ಹಾಗೂ ಲವಕುಶ ಚಿತ್ರಗಳಿಗೆ ಕಂಠದಾನ ಮಾಡುವ ಮೂಲಕ ಅಪಾರ ಅಭಿಮಾನಿಗಳ ಹೃದಯ ಗೆದ್ದರು.
ಇದರ ಜೊತೆಗೆ ಪುನೀತ್ ರಾಜ್‌ಕುಮಾರ್ ಹಾಡಿದ ಇತರ ಪ್ರಮುಖ ಹಾಡುಗಳೆಂದರೆ 2008ರಲ್ಲಿ ಬಂದ ವಂಶಿ ಚಿತ್ರದ ಜೊತೆ ಜೊತೆಯಲಿ, 2009ರ ರಾಮ್ ಸಿನಿಮಾದ ಹೊಸ ಗಾನಬಜಾನ, 2010ರಲ್ಲಿ ಸೂಪರ್ ಹಿಟ್ ಆದ ಜಾಕಿ ಚಿತ್ರದ ಎಡವಟ್ಟಾಯ್ತು ತಲೆಕೆಟ್ ಹೋಯ್ತು. ಹಾಗೆಯೇ ಮೈಲಾರಿ ಚಿತ್ರದಲ್ಲಿ ಮೈಲಾಪುರ ಮೈಲಾರಿ, 2011ರಲ್ಲಿ ಬಂದ ಶೈಲು ಚಿತ್ರದಲ್ಲಿ ಪದ ಪದ ಕನ್ನಡ ಪದ ಹಾಗು 2013ರಲ್ಲಿ ಸೂಪರ್ ಹಿಟ್ ಆದ ಅಧ್ಯಕ್ಷ ಚಿತ್ರದ ಅಧ್ಯಕ್ಷ ಚಿತ್ರದ ಹಾಡು, 2014ರಲ್ಲಿ ಬಂದ ಪವರ್ ಸಿನಿಮಾದ ಗುರುವಾರ ಸಂಜೆ ನಾ ಹೊರಟಿದ್ದೇ ಅಲಿಯೋಕೆ, ಮಾಸ್ ಸಿನಿಮಾ ದೊಡ್ಮನೆ ಹುಡುಗ ಚಿತ್ರದ ಅಭಿಮಾನಿಗಳೇ ನಮ್ಮನೇ ದೇವರು, ರಾಂಬೋ 2 ಚಿತ್ರದ ಎಲ್ಲಿ ಕಾಣೆ ಎಲ್ಲಿ ಕಾಣೆನೋ ಹಾಗು 2020ರಲ್ಲಿ ಯುವರತ್ನ ಚಿತ್ರದಲ್ಲಿ ಊರಿಗೊಬ್ಬ ರಾಜ ರಾಜನಿಗೊಬ್ಬ ರಾಣಿ ಎಂಬ ಹಾಡುಗಳು ಅಭಿಮಾನಿಗಳ ಮನಸೆಳೆದಿವೆ.
ಪವರ್ಸ್ಟಾರ್ ಪುನೀತ್ ರಾಜ್‌ಕುಮಾರ್ ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ 'ಜಾಕಿ' ಮರು ಬಿಡುಗಡೆ, ಭರ್ಜರಿ ಪ್ರದರ್ಶನ