'ಚೌಕಿದಾರ್' ಕ್ಯಾಚಿ ಟೈಟಲ್ನಿಂದಲೇ ಸಿನಿಪ್ರೇಮಿಗಳಲ್ಲಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. 'ರಥಾವರ' ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್ ಬಂಡಿಯಪ್ಪ ಸಾರಥ್ಯದ ಈ ಚಿತ್ರದ ಅಂಗಳದಿಂದ ಹೊಸ ಅಪ್ಡೇಟ್ ಸಿಕ್ಕಿದೆ. ಬಂಡೆ ಮಹಾಕಾಳಿ ಆಶೀರ್ವಾದ ಪಡೆದು ಶೂಟಿಂಗ್ ಅಖಾಡಕ್ಕೆ ಇಳಿದಿದ್ದ ಚಿತ್ರತಂಡವೀಗ 53 ದಿನಗಳ ಚಿತ್ರೀಕರಣ ಮುಗಿಸಿದೆ. ನೈಸರ್ಗಿಕ ಸೌಂದರ್ಯಕ್ಕೆ ಖ್ಯಾತಿ ಪಡೆದಿರುವ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಚೌಕಿದಾರ್ ಸಿನಿಮಾವನ್ನು 10 ದಿನಗಳ ಕಾಲ ಚಿತ್ರೀಕರಿಸಲಾಗಿದೆ.
ಪ್ಯಾನ್ ಇಂಡಿಯಾ ಮಟ್ಟದ 'ಚೌಕಿದಾರ್' ಸಿನಿಮಾವನ್ನು ಅಷ್ಟೇ ಅದ್ಧೂರಿಯಾಗಿ ಹಾಗೂ ಸೊಗಸಾಗಿ ನಿರ್ಮಿಸಲಾಗುತ್ತಿದೆ. ಅದರಂತೆ ಚಿತ್ರತಂಡ ಅಂಡಮಾನ್-ನಿಕೋಬರ್ ದ್ವೀಪದಲ್ಲಿ ಚಿತ್ರೀಕರಣ ನಡೆಸಿದೆ. ಶಿವಣ್ಣ ನಟನೆಯ ಅಂಡಮಾನ್ ಸಿನಿಮಾದ ಶೂಟಿಂಗ್ ಈ ಜಾಗದಲ್ಲಿ ನಡೆದಿತ್ತು. ಈ ಚಿತ್ರ ಹೊರತುಪಡಿಸಿ ಮತ್ಯಾವುದೇ ಕನ್ನಡ ಸಿನಿಮಾಗಳ ಶೂಟಿಂಗ್ ನಡೆದಿಲ್ಲ. ಈಗ ಚೌಕಿದಾರ್ ಅಂಡಮಾನ್-ನಿಕೋಬರ್ ದ್ವೀಪಗಳಲ್ಲಿ ಬರೋಬ್ಬರಿ 10 ದಿನಗಳ ಕಾಲ ಹಾಡು ಹಾಗೂ ಚಿತ್ರದ ಕೆಲ ದೃಶ್ಯಗಳನ್ನು ಸೆರೆ ಹಿಡಿದುಕೊಂಡು ಬಂದಿದೆ. ಒಟ್ಟಾರೆ 53 ದಿನಗಳ ಕಾಲ 'ಚೌಕಿದಾರ್' ಸಿನಿಮಾದ ಮೊದಲ ಹಂತದ ಚಿತ್ರೀಕರಣ ನಡೆದಿದೆ.
ಅಂಡಮಾನ್-ನಿಕೋಬರ್ ದ್ವೀಪದಲ್ಲಿ ನಡೆದ ಚಿತ್ರೀಕರಣದಲ್ಲಿ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ, ನಾಯಕ ಪೃಥ್ವಿ ಅಂಬಾರ್, ನಾಯಕಿ ಧನ್ಯಾ ರಾಮ್ಕುಮಾರ್, ಹಿರಿಯ ಕಲಾವಿದರಾದ ಸಾಯಿಕುಮಾರ್, ನೃತ್ಯ ಸಂಯೋಜಕ ಮುರುಳಿ ಮಾಸ್ಟರ್ ಹಾಗೂ ಸೌತ್ ಇಂಡಿಯಾದ ಕೆಲ ಟೆಕ್ನಿಷಿಯನ್ ಭಾಗಿಯಾಗಿದ್ದರು.
ಪೃಥ್ವಿ ಅಂಬಾರ್ ಈವರೆಗೆ ಪ್ರೀತಿ-ಪ್ರೇಮದಂತಹ ಕಥೆಗಳಲ್ಲಿಯೇ ಹೆಚ್ಚು ಅಭಿನಯಿಸಿದ್ದಾರೆ. ಲವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಆದ್ರೆ, ಡೈರೆಕ್ಟರ್ ಚಂದ್ರಶೇಖರ್ ಬಂಡಿಯಪ್ಪ ಅದನ್ನು ಬದಲಿಸಬೇಕು ಅನ್ನೋ ಯೋಚನೆ ಮಾಡಿದ್ದಾರೆ. ಹಾಗಾಗಿಯೇ ಚೌಕಿದಾರ್ ಚಿತ್ರದಲ್ಲಿ ಪೃಥ್ವಿ ಅಂಬಾರ್ ರಗಡ್ ಲುಕ್ನಲ್ಲಿ ದರ್ಶನ ಕೊಡಲಿದ್ದಾರೆ. ವಿಭಿನ್ನ ಕಥಾಹಂದರವನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ಹೊಸ ರೂಪದಲ್ಲಿ ಪೃಥ್ವಿ ನಿಮ್ಮ ಮುಂದೆ ಬರಲಿದ್ದಾರೆ.