ಕನ್ನಡ ಚಿತ್ರರಂಗದಲ್ಲಿ ಪಲ್ಲಕ್ಕಿ, ಗಣಪ, ಪಾರಿಜಾತದಂಥ ಅದ್ಭುತ ಚಿತ್ರಗಳನ್ನು ನಿರ್ದೇಶಿಸಿರೋ ಪರಮೇಶ್ ಬಹಳ ದಿನಗಳ ಬಳಿಕ ಮತ್ತೊಂದು ಇನ್ಟೆನ್ಸ್ ಲವ್ ಸ್ಟೋರಿಯೊಂದಿಗೆ ಪ್ರೇಕ್ಷಕರೆದುರು ಬರಲು (ನಿರ್ಮಾಪಕನಾಗಿ) ಸಜ್ಜಾಗಿದ್ದಾರೆ. ಈ ಪ್ರೇಮಕಥೆಗೆ 'ಪ್ರಣಯಂ' ಎಂಬ ಶೀರ್ಷಿಕೆ ಇಡಲಾಗಿದೆ. 'ಬಿಚ್ಚುಗತ್ತಿ' ಖ್ಯಾತಿಯ ರಾಜವರ್ಧನ್ ಹಾಗೂ ನೈನಾ ಗಂಗೂಲಿ ಮುಖ್ಯಭೂಮಿಕೆಯಲ್ಲಿರೋ ಪ್ರಣಯಂ ಚಿತ್ರದ ಟ್ರೈಲರ್ ಅನ್ನು ಮಾಜಿ ಉಪ ಮೇಯರ್ ಮೋಹನ್ ರಾಜು ಬಿಡುಗಡೆ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಟೈಟಲ್ ಕನ್ನಡದ ಜೊತೆ ತೆಲುಗು ಭಾಷೆಗೂ ಹತ್ತಿರವಾಗುವಂತಿದೆ. ಹಾಡು, ಕಾನ್ಸೆಪ್ಟ್ ಎರಡೂ ಚೆನ್ನಾಗಿದೆ ಎಂದು ಹೇಳಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ನಿರ್ದೇಶಕ ದತ್ತಾತ್ರೇಯ ಮಾತನಾಡಿ, ನಾನು ಈ ಸ್ಕ್ರಿಪ್ಟ್ ರೆಡಿ ಮಾಡಿಕೊಂಡು ಬಂದಾಗ ನಿರ್ಮಾಪಕರು ತುಂಬಾ ಚೆನ್ನಾಗಿದೆ ಎಂದು ಖುಷಿಯಿಂದ ಅಪ್ಪಿಕೊಂಡರು. ಸುಮಾರು ಲೊಕೇಶನ್ಗಳನ್ನು ನೋಡಿ ಕೊನೆಗೆ ಮಡಿಕೇರಿಯಲ್ಲಿ ನಮಗೆ ಬೇಕಾದ ಲೊಕೇಶನ್ ಸಿಕ್ತು. ಎಲ್ಲ ಲೆಜೆಂಡರಿಗಳ ಸಹಕಾರದಿಂದ ಸಿನಿಮಾ ಅದ್ಭುತವಾಗಿ ಬಂದಿದೆ. ನಾಗೇಶ್ ನನಗೆ ಇನ್ನೊಂದು ಕಣ್ಣಿದ್ದ ಹಾಗೆ. ತುಂಬಾ ಚೆನ್ನಾಗಿ ಶೂಟ್ ಮಾಡಿಕೊಟ್ಟಿದ್ದಾರೆ. ಎಲ್ಲರೂ ಸೇರಿ ಒಳ್ಳೆಯ ಸಿನಿಮಾ ಕೊಟ್ಟಿದ್ದೇವೆ. ಪ್ರೇಕ್ಷಕರು ಇಷ್ಟಪಡುತ್ತಾರೆಂಬ ವಿಶ್ವಾಸವಿದೆ ಎಂದು ತಿಳಿಸಿದರು.
ಇನ್ನು ನಾಯಕ ರಾಜವರ್ಧನ್ ಮಾತನಾಡಿ ಬಿಚ್ಚುಗತ್ತಿಗೂ ಮುನ್ನ ಪರಮೇಶ್ ಈ ಕಥೆಯನ್ನು ಹೇಳಿದ್ದರು. ಇಂದಿನ ಕುಟುಂಬಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಅಂಥ ಒಂದು ಸ್ಟ್ರಾಂಗ್ ಕಂಟೆಂಟ್ ಇಟ್ಟುಕೊಂಡು ನಾವು ಈ ಸಿನಿಮಾ ಮಾಡಿದ್ದೇವೆ. ಆಡಿಯನ್ಸ್ಗೆ ಬೇಕಾದ ಕಾನ್ಸೆಪ್ಟ್ ಚಿತ್ರದಲ್ಲಿದೆ. ಆಗಿನ್ನೂ ವಿದೇಶದಿಂದ ಬರುವ ಗೌತಂ ಎಂಬ ಪಾತ್ರ ನಿರ್ವಹಿಸಿದ್ದೇನೆ. ಆತ 5-10 ದಿನಗಳಲ್ಲಿ ಸಂಬಂಧಿ ಹುಡುಗಿಯೊಬ್ಬಳನ್ನು ಮದುವೆಯಾಗುತ್ತಾನೆ. ಆನಂತರ 15-20 ದಿನಗಳಲ್ಲಿ ನಡೆಯುವ ಕಥೆ ಈ ಚಿತ್ರದಲ್ಲಿದೆ. ಮನೋಮೂರ್ತಿ, ಜಯಂತ್ ಕಾಯ್ಕಿಣಿ ಅವರಂಥ ಲೆಜೆಂಡರಿಗಳ ಜೊತೆ ಕೆಲಸ ಮಾಡಿದ್ದು ನನ್ನ ಅದೃಷ್ಟ ಎಂದು ತಿಳಿಸಿದರು.
ಸಂಗೀತ ನಿರ್ದೇಶಕ ಮನೋಮೂರ್ತಿ ಮಾತನಾಡಿ, ಚಿತ್ರದಲ್ಲಿ 5 ಹಾಡುಗಳಿವೆ. ಕ್ಯಾಮರಾ ವರ್ಕ್ ಅದ್ಭುತವಾಗಿ ಮೂಡಿಬಂದಿದೆ. ಪ್ರಣಯಂ ಅಂದ್ರೆ ಪ್ರೀತಿ. ಅದನ್ನಿಲ್ಲಿ ಬಹಳ ವಿಭಿನ್ನವಾಗಿ ಹೇಳಿದ್ದಾರೆ. ಖಂಡಿತ ಈ ವರ್ಷದ ಮೊದಲ ಹಿಟ್ ಸಿನಿಮಾ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.