ಬೆಳಗಾವಿ: ಕಾರು ಟಚ್ ಆದ ವಿಚಾರಕ್ಕೆ ಆಟೋ ಚಾಲಕ ನಡೆಸಿದ ಹಲ್ಲೆಯ ಬಳಿಕ ಗೋವಾ ಮಾಜಿ ಶಾಸಕ ಲಾವೂ ಮಾಮಲೇದಾರ್ (69) ಅವರು ಮೃತಪಟ್ಟಿದ್ದು, ಇದೀಗ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಖಡೇಬಜಾರ್ ಬಳಿ ತನ್ನ ವಾಹನಕ್ಕೆ ಕಾರು ತಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಲಾವೂ ಮಾಮಲೇದಾರ್ ಅವರ ಕಪಾಳಕ್ಕೆ ಹೊಡೆದು ಸುಭಾಷ ನಗರದ ನಿವಾಸಿ ಮುಜಾಹಿದಿಲ್ ಶಕೀಲ್ ಜಮಾದಾರ್ ಶನಿವಾರ ಹಲ್ಲೆ ಮಾಡಿದ್ದ. ಈ ವೇಳೆ ಸ್ಥಳೀಯರು ಜಗಳ ಬಿಡಿಸಿದ್ದರು. ನಂತರ ತಾವು ತಂಗಿದ್ದ ಲಾಡ್ಡ್ ರೂಮ್ ಕಡೆ ಹೋಗುವಾಗ ಮೆಟ್ಟಿಲು ಮೇಲೆಯೇ ಲಾವೂ ಕುಸಿದು ಬಿದ್ದಿದ್ದರು. ತಕ್ಷಣವೇ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಷ್ಟೊತ್ತಿಗಾಗಲೇ ಮೃತಪಟ್ಟಿದ್ದರು. ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ, ಡಿಸಿಪಿ ರೋಹನ್ ಜಗದೀಶ ಭೇಟಿ ನೀಡಿ ಪರಿಶೀಲಿಸಿದ್ದರು. ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗೋವಾ ಮಾಜಿ ಶಾಸಕರ ಕುಟುಂಬಸ್ಥರು ಬೆಳಗಾವಿಗೆ ದೌಡಾಯಿಸಿದರು. ಈ ವೇಳೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಲಾವೂ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಗೋವಾಕ್ಕೆ ಕಳಿಸಿಕೊಡಲಾಯಿತು.
ಪ್ರತ್ಯಕ್ಷದರ್ಶಿ ಅಡಿವೆಪ್ಪ ಕರಿಲಿಂಗನವರ ಎಂಬವರು ನೀಡಿದ ದೂರಿನ ಅನ್ವಯ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಆರೋಪಿ ಮುಜಾಹಿದಿಲ್ ಶಕೀಲ್ ಜಮಾದಾರ್ ಬೆನ್ನಟ್ಟಿ ಲಾವೂ ಮಾಮಲೇದಾರ್ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಿನ್ನೆಯೇ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಲಾವೂ ಅವರು ಗೋವಾ ರಾಜ್ಯದ ಪೋಂಡಾ ಕ್ಷೇತ್ರಕ್ಕೆ 2012-2017ರ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದರು.
ಇದನ್ನೂ ಓದಿ: ಬೆಳಗಾವಿ: ಆಟೋ ಚಾಲಕನಿಂದ ಹಲ್ಲೆ ಬಳಿಕ ಕುಸಿದು ಬಿದ್ದು ಗೋವಾ ಮಾಜಿ ಶಾಸಕ ಸಾವು
ಇದನ್ನೂ ಓದಿ: ಆಕಸ್ಮಿಕವಾಗಿ ಗುಂಡು ತಗುಲಿ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಬೆಳಗಾವಿ ಯೋಧ ಸಾವು