ಬಹುಭಾಷಾ ನಟ ಪ್ರಕಾಶ್ ರಾಜ್ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುತ್ತಿರುವ ತಮ್ಮ ನಕಲಿ ಫೋಟೋ ಕಂಡು ಕಿಡಿಕಾರಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಮಹಾ ಕುಂಭಮೇಳ ನಡೆಯುತ್ತಿದ್ದು, ಕೆಲ ನೆಟ್ಟಿಗರು AI ಮೂಲಕ ಪುಣ್ಯ ಸ್ನಾನ ಮಾಡುತ್ತಿರುವ ಪ್ರಸಿದ್ಧ ವ್ಯಕ್ತಿಗಳ ನಕಲಿ ಫೋಟೋ ರಚಿಸಿ ಅದನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಪ್ರಕಾಶ್ ರಾಜ್ ತಮ್ಮ ನಕಲಿ ಫೋಟೋಗೆ ಆಕ್ಷೇಪ ವ್ಯಕ್ತಪಡಿಸಿ, ದೂರು ದಾಖಲಿಸಿದ್ದಾರೆ.
ಪ್ರಕಾಶ್ ರಾಜ್ ನಕಲಿ ಫೋಟೋ ವೈರಲ್:ಕಳೆದ ಕೆಲ ದಿನಗಳಿಂದ ಪವಿತ್ರ ಮಹಾ ಕುಂಭಮೇಳ ನಡೆಯುತ್ತಿದೆ. ವಿವಿಧ ಕ್ಷೇತ್ರಗಳ ಗಣ್ಯರೂ ಸೇರಿದಂತೆ ಕೋಟ್ಯಂತರ ಭಕ್ತರು ಪವಿತ್ರ ಸ್ನಾನ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೀಗ ಮಹಾ ಕುಂಭಮೇಳದ್ದೇ ಸದ್ದು. ಫೋಟೋ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ಅದರಂತೆ, ಇತ್ತೀಚೆಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರ ಫೋಟೋ ಕೂಡಾ ವೈರಲ್ ಆಗಿತ್ತು. ಆದ್ರಿದು ನಕಲಿ ಫೋಟೋ.
ಟ್ವೀಟ್ ಮೂಲಕ ಟೀಕೆ: ತಾವು ಕುಂಭಮೇಳದಲ್ಲಿ ಭಾಗಿಯಾಗಿಲ್ಲ ಅನ್ನೋದನ್ನು ಟ್ವೀಟ್ ಮೂಲಕ ಸ್ವತಃ ನಟನೇ ಬಹಿರಂಗಪಡಿಸಿದ್ದಾರೆ. ಪ್ರಕಾಶ್ ರಾಜ್ ಆಕ್ರೋಶ, ಅವರ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕಾಣಬಹುದಾಗಿದೆ. ಟ್ವೀಟ್ ಮೂಲಕ ವಿರೋಧಿಗಳನ್ನು ಟೀಕಿಸಿದ್ದಾರೆ.
ಟ್ವೀಟ್ನಲ್ಲೇನಿದೆ?ತಮ್ಮ ಎಕ್ಸ್ ಖಾತೆಯಲ್ಲಿ ನಕಲಿ ಫೋಟೋ ಹಂಚಿಕೊಂಡಿದ್ದಾರೆ. ಈ ವೈರಲ್ ಫೋಟೋದಲ್ಲಿ ಪ್ರಕಾಶ್ ರಾಜ್ ನದಿಯಲ್ಲಿ ಕೈಮುಗಿದು ಪ್ರಾರ್ಥಿಸುತ್ತಿರುವುದನ್ನು ಕಾಣಬಹುದು. ಜೊತೆಗೆ, ''ಇದು ಸುಳ್ಳು ಸುದ್ದಿ. ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ. ಪೊಲೀಸ್ ದೂರು ದಾಖಲಾಗಿದೆ. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ'' ಎಂದು ಬರೆದುಕೊಂಡಿದ್ದಾರೆ.