ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಭಾರತೀಯ ಚಿತ್ರರಂಗದಲ್ಲಿ ನಿರ್ದೇಶಕ, ನಟ, ನೃತ್ಯ ನಿರ್ದೇಶಕ, ನಿರ್ಮಾಪಕರಾಗಿಯೂ ಗುರುತಿಸಿಕೊಂಡಿರುವ ಪ್ರಭುದೇವ ಇಂದು 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಕುಟುಂಬ ಸದಸ್ಯರು, ಸಿನಿ ಸ್ನೇಹಿತರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ವಿಶೇಷವಾಗಿ ಶುಭ ಕೋರುತ್ತಿದ್ದಾರೆ. ನಟ ಅಭಿನಯಿಸುತ್ತಿರುವ ಮುಂದಿನ ಬಹುನಿರೀಕ್ಷಿತ ಚಿತ್ರದಿಂದ ಪೋಸ್ಟರ್ ಕೂಡ ಅನಾವರಣಗೊಂಡಿದೆ.
ಬರ್ತ್ಡೇ ಬಾಯ್ ಪ್ರಭುದೇವ ಅವರಿಗೆ ನಿರ್ದೇಶಕ ವೆಂಕಟ್ ಪ್ರಭು ಕೂಡ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. 'GOAT' ಎಂದೂ ಕರೆಯಲ್ಪಡುವ 'ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್' ಚಿತ್ರದಿಂದ ನಟ ಪ್ರಭುದೇವ ಅವರ ಪೋಸ್ಟರ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಶೇರ್ ಮಾಡೋ ಮುಖೇನ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.
ಪ್ರಭುದೇವ ಅವರ ಹುಟ್ಟುಹಬ್ಬದ ಹಿನ್ನೆಲೆ, ವೆಂಕಟ್ ಪ್ರಭು ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷ ಪೋಸ್ಟರ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟರ್‌ನಲ್ಲಿ ಪ್ರಭುದೇವ ಬಂದೂಕು ಹಿಡಿದಿದ್ದಾರೆ. ಹಿಂದೆ ಬಂದೂಕು ಹಿಡಿದಿರುವ ನೆರಳಿನ ಚಿತ್ರವಿದ್ದು, ಮುಂಬದಿಯಲ್ಲಿ ಸ್ಮೈಲಿಂಗ್ ಫೇಸ್ ಫೋಟೋ ಕೂಡ ಇದೆ. ಪೋಸ್ಟ್ಗೆ, ''ಎ ವೆರಿ ಹ್ಯಾಪಿ ಬರ್ತ್ಡೇ ಡ್ಯಾನ್ಸಿಂಗ್ ಮಾಸ್ಟರ್. GOAT (ದಿ ಗ್ರೇಟೆಸ್ಟ್ ಆಫ್ ಆಲ್ ಟೈಮ್) ತಂಡ ನಿಮ್ಮನ್ನು ಪ್ರೀತಿಸುತ್ತದೆ'' ಎಂದು ಬರೆದುಕೊಂಡಿದ್ದಾರೆ.
ಫೋಸ್ಟರ್ ಶೇರ್ ಆಗುತ್ತಿದ್ದಂತೆ ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸಲು ಶುರು ಹಚ್ಚಿಕೊಂಡಿದ್ದಾರೆ. ಪ್ರಭುದೇವ ಅವರ ವಿಶೇಷ ದಿನವನ್ನು ಅಭಿಮಾನಿಗಳು ಮತ್ತಷ್ಟು ವಿಶೇಷವಾಗಿಸುತ್ತಿದ್ದಾರೆ. ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. '#TheGreatestOfAllTime' ಎಂಬ ಹ್ಯಾಶ್‌ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ.