ಭಾರತೀಯ ಚಿತ್ರರಂಗದ ಸ್ಟಾರ್ ನಟ - ನಿರ್ದೇಶಕ ಜೋಡಿ ಮಹೇಶ್ ಬಾಬು ಮತ್ತು ಎಸ್.ಎಸ್.ರಾಜಮೌಳಿ ಕಾಂಬಿನೇಷನ್ನಲ್ಲಿ ಸಾಹಸಮಯ ಸಿನಿಮಾ ರೆಡಿಯಾಗುತ್ತಿರೋದು ನಿಮಗೆ ತಿಳಿದೇ ಇದೆ. 'SSMB29' ಎಂಬ ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹೇಶ್ ಬಾಬು ಪಾಸ್ ಪೋರ್ಟ್ ನನ್ನಲ್ಲಿದೆ ಎಂಬರ್ಥದ ರಾಜಮೌಳಿ ವಿಡಿಯೋ ಹಂಚಿಕೊಂಡಿದ್ದು, ಈ ಬೆನ್ನಲ್ಲೇ ಸಿನಿಮಾ ಶೂಟಿಂಗ್ ಶುರುವಾಗಿದೆ ಎಂದು ನಂಬಲಾಗಿದೆ.
ಬಿಗ್ ಬಜೆಟ್ನಲ್ಲಿ ನಿರ್ಮಾಣವಾಗುತ್ತಿರೋ ಸಿನಿಮಾಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಸೋರಿಕೆಯಾಗದಂತೆ ಜಕ್ಕಣ್ಣ ಮತ್ತು ಅವರ ತಂಡ ತುಂಬಾನೇ ಎಚ್ಚರಿಕೆ ವಹಿಸಿದೆ. ಮಹೇಶ್ ಬಾಬು ಮತ್ತು ಪ್ರಿಯಾಂಕಾ ಚೋಪ್ರಾ ಹೊರತುಪಡಿಸಿ ಚಿತ್ರಕ್ಕೆ ಸಂಬಂಧಿಸಿದ ಯಾವುದೇ ವಿವರಗಳನ್ನು ಬಹಿರಂಗಪಡಿಸದಂತೆ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.
ಈ ನಿಟ್ಟಿನಲ್ಲಿ ಚಿತ್ರತಂಡಕ್ಕೆ ಸ್ಟ್ರಾಂಗ್ ವಾರ್ನಿಂಗ್ ನೀಡಲಾಗಿದೆಯಂತೆ. ಇದರ ಭಾಗವಾಗಿ ನಟರು ಮತ್ತು ತಂತ್ರಜ್ಞರೊಂದಿಗೆ ಒಪ್ಪಂದ (non-disclosure agreement) ಮಾಡಿಕೊಳ್ಳಲಾಗಿದೆ ಎಂದು ವರದಿಗಳು ತಿಳಿಸಿವೆ. ಇದರ ಪ್ರಕಾರ, ಸಿನಿಮಾಗೆ ಸಂಬಂಧಿಸಿದಂತೆ ಯಾವುದೇ ವಿಷಯವನ್ನು ಬಹಿರಂಗಪಡಿಸುವಂತಿಲ್ಲ. ನಿರ್ದೇಶಕ ಮತ್ತು ನಿರ್ಮಾಪಕರ ಅನುಮತಿಯಿಲ್ಲದೇ ಯಾರಾದರೂ ಮಾಹಿತಿ ಸೋರಿಕೆ ಮಾಡಿದರೆ ಅಥವಾ ಬಹಿರಂಗಪಡಿಸಿದರೆ, ಅವರು ದೊಡ್ಡ ಬೆಲೆ ತೆರಬೇಕಾಗುತ್ತದೆ.
ಇದನ್ನೂ ಓದಿ: ಸಿಂಹವನ್ನು ಕೂಡಿಹಾಕಿದ ’ಬಾಹುಬಲಿ‘: ಶೂಟಿಂಗ್ ಮುಗಿಯೋವರೆಗೂ ಹೊರಗೆ ಬರುವಂತಿಲ್ಲ ’ಪ್ರಿನ್ಸ್’
ಅಲ್ಲದೇ, ಸೆಟ್ನಲ್ಲಿ ಹೀರೋ ಸೇರಿದಂತೆ ಯಾರೂ ಫೋನ್ ತರುವಂತಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಸದ್ಯ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಹಾಕಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ನಡೆಯುತ್ತಿದೆ ಎಂದು ವರದಿಯಾಗಿದೆ. ಇನ್ನೂ ಎರಡ್ಮೂರು ಕಡೆಗಳಲ್ಲಿ ವಿಶೇಷ ಸೆಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ತಯಾರಾಗುತ್ತಿರುವ ಚಿತ್ರವಾಗಿರುವುದರಿಂದ ಮುನ್ನೆಚ್ಚರಿಕೆ ವಹಿಸಬೇಕು ಎಂಬುದು ಚಿತ್ರ ಮೂಲಗಳ ಅಭಿಪ್ರಾಯ.
ಇದನ್ನೂ ಓದಿ: ವಿವಾಹ ವಾರ್ಷಿಕೋತ್ಸವದಂದೇ ಗಂಡು ಮಗುವಿಗೆ ಜನ್ಮ ನೀಡಿದ ಹರಿಪ್ರಿಯಾ : ಮರಿ ಸಿಂಹನ ಫೋಟೋ ಹಂಚಿಕೊಂಡ ವಸಿಷ್ಠ ಸಿಂಹ
ಮತ್ತೋರ್ವ ಸೂಪರ್ ಸ್ಟಾರ್ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸಹ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ವರದಿಗಳಿವೆ. ಬಾಲಿವುಡ್ ನಟ ಜಾನ್ ಅಬ್ರಹಾಂ ಹೆಸರು ಸಹ ಕೇಳಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಮಾಹಿತಿ ಇಲ್ಲ. ರಾಜಮೌಳಿ ಅವರ ಲೇಟೆಸ್ಟ್ ಪೋಸ್ಟ್ಗಾಗಿ ಮೀಮ್ಸ್ ಮತ್ತು ಫನ್ನಿ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಒಂದು ಅಥವಾ ಎರಡು ಶೆಡ್ಯೂಲ್ಗಳ ನಂತರ ಅವರು ಈ ಚಿತ್ರದ ಬಗ್ಗೆ ಮಾಹಿತಿ ನೀಡಲಿದ್ದಾರೆಯೇ ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ.