ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ವಿರುದ್ಧ ಸಾಕಷ್ಟು ಸಾಕ್ಷ್ಯಾಧಾರಗಳು ಸಿಕ್ಕಿವೆ ಎಂದು ಮುಂಬೈ ಪೊಲೀಸರು ಇಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವು ಈ ಪ್ರಕರಣದ ವಿವರಗಳನ್ನು ಮತ್ತು ತನಿಖೆ ಮಾಹಿತಿಯನ್ನು ಒದಗಿಸಿತು.
ಜನವರಿ 16ರ ಮುಂಜಾನೆ ಬಾಂದ್ರಾದಲ್ಲಿನ ಸೈಫ್ ಕರೀನಾ ನಿವಾಸಕ್ಕೆ ನುಗ್ಗಿದ ವ್ಯಕ್ತಿ ನಟನಿಗೆ ಚಾಕುವಿನಿಂದ ಇರಿದಿದ್ದ. ಆ ಕೂಡಲೇ ನಟನನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸಲಾಯಿತು. ಎರಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರಕ್ತದಲ್ಲಿ ತೊಯ್ದಿದ್ದ ನಟನನ್ನು ಆಟೋ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲರ ಹೇಳಿಕೆಗಳನ್ನು ದಾಖಲಿಸಿಕೊಂಡಿರುವುದಾಗಿ ಮುಂಬೈ ಪೊಲೀಸರು ಬಹಿರಂಗಪಡಿಸಿದ್ದಾರೆ. ಫಿಂಗರ್ ಪ್ರಿಂಟ್‌ಗಳು ಹೊಂದಿಕೆಯಾಗುತ್ತಿಲ್ಲ ಎಂಬ ವರದಿಗಳನ್ನು ತಳ್ಳಿಹಾಕಿದ್ದು, ಆ ವರದಿಯನ್ನು ಇನ್ನೂ ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ. 101 ನಿಮಿಷಗಳ ನಂತರ ಸೈಫ್ ಆಸ್ಪತ್ರೆಗೆ ಬಂದರು ಎಂಬ ಹೇಳಿಕೆಯನ್ನು ಸಹ ಮುಂಬೈ ಪೊಲೀಸರು ತಳ್ಳಿಹಾಕಿದ್ದಾರೆ.
ಮುಂಬೈ ಪೊಲೀಸರು ತನಿಖೆಯ ಭಾಗವಾಗಿ ಸೈಫ್ ಅಲಿ ಖಾನ್ ಅವರ ರಕ್ತದ ಮಾದರಿ ಮತ್ತು ಬಟ್ಟೆಗಳನ್ನು ತನಿಖೆಗಾಗಿ ಸಂಗ್ರಹಿಸಿದ್ದರು. ಕಳ್ಳತನ ಮಾಡುವ ಉದ್ದೇಶದಿಂದ ನಟನ ಮನೆಗೆ ನುಗ್ಗಿದ ಆರೋಪಿ ಮೊಹಮ್ಮದ್ ಷರೀಫುಲ್ ಇಸ್ಲಾಂ ಶೆಹಜಾದ್, ನಟನ ಮೇಲೆ ದಾಳಿ ನಡೆಸಿದ್ದ. ಹಿಂಸಾತ್ಮಕ ಘಟನೆಯಲ್ಲಿ, ನಟನ ಬೆನ್ನುಮೂಳೆ, ಕುತ್ತಿಗೆ, ಕೈ ಸೇರಿ ಹಲವೆಡೆ ಗಂಭೀರ ಗಾಯಗಳಾಗಿದ್ದವು.
ಇದನ್ನೂ ಓದಿ: ಭೋಪಾಲ್‌ನಲ್ಲಿ 15,000 ಕೋಟಿ ಮೌಲ್ಯದ ಆಸ್ತಿ ಕಳೆದುಕೊಳ್ತಾರಾ ಸೈಫ್ ಅಲಿ ಖಾನ್?
ಆರೋಪಿ ಬಂಧನಕ್ಕಾಗಿ ಮುಂಬೈ ಪೊಲೀಸರು ಹಲವು ತಂಡಗಳಾಗಿ ಕಾರ್ಯಾಚರಣೆ ನಡೆಸಿದ್ದರು. 12 ವಿಶೇಷ ತಂಡಗಳ ರಚನೆ ನಂತರ ನಂತರ ಆರೋಪಿ ಸಿಕ್ಕಬಿದ್ದ. ದಾಳಿ ನಡೆದ 70 ಗಂಟೆಯೊಳಗೆ ಆತನನ್ನು ಬಂಧಿಸಲಾಯಿತು. ಆರೋಪಿಯನ್ನು ಜನವರಿ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದನ್ನೂ ಓದಿ: ಮಹೇಶ್ ಬಾಬು ರಾಜಮೌಳಿ ಸಿನಿಮಾ: ತಂಡದವರಿಗೆ ಕಂಡೀಷನ್ಸ್ ಅಪ್ಲೈ; ಏನದು?
ದಾಳಿ ನಡೆದ ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಕೆಲವೇ ದಿನಗಳಲ್ಲಿ ಡಿಸ್ಚಾರ್ಜ್ ಕೂಡಾ ಆದ್ರು. ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ಬಳಿಕ, ಮುಂಬೈ ಕ್ರೈಂ ಬ್ರ್ಯಾಂಚ್ ನಟನ ಹೇಳಿಕೆ ದಾಖಲಿಸಿಕೊಂಡಿತ್ತು. ಜನವರಿ 16ರ ಮುಂಜಾನೆ ನಡೆದ ಘಟನೆ ಬಗ್ಗೆ ನಟ ಅಧಿಕಾರಿಗಳ ಬಳಿ ಸಂಪೂರ್ಣವಾಗಿ ವಿವರಿಸಿದ್ದರು. ಪ್ರಕರಣದ ತನಿಖೆ ಸಾಗಿದ್ದು, ಅಸಲಿ ವಿಷಯ ಏನೆಂದು ತಿಳಿದುಕೊಳ್ಳಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.