ಹೈದರಾಬಾದ್: ವರುಣಾರ್ಭಟಕ್ಕೆ ಎರಡು ತೆಲುಗು ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ನಲುಗಿದೆ. ವಿನಾಶಕಾರಿ ಪ್ರವಾಹದ ಹಿನ್ನೆಲೆಯಲ್ಲಿ ಸಾವು-ನೋವಿನ ಸಂಖ್ಯೆ ಏರುತ್ತಿದೆ. ಈ ಸವಾಲಿನ ಸಂದರ್ಭದಲ್ಲಿ ಸಿನಿ ಸೆಲೆಬ್ರಿಟಿಗಳು ತಮ್ಮ ಸಹಾಯಹಸ್ತ ಚಾಚುತ್ತಿದ್ದಾರೆ. ಪರಿಹಾರ ಕಾರ್ಯಗಳಿಗೆ ಸಹಾಯವಾಗೋ ನಿಟ್ಟಿನಲ್ಲಿ ಟಾಲಿವುಡ್ ದಿಗ್ಗಜರಾದ ಮಹೇಶ್ ಬಾಬು, ಪವನ್ ಕಲ್ಯಾಣ್, ಚಿರಂಜೀವಿ, ಅಲ್ಲು ಅರ್ಜುನ್, ಪ್ರಭಾಸ್ ದೇಣಿಗೆ ಘೋಷಿಸಿದ್ದಾರೆ.
ಪ್ರವಾಹಪೀಡಿತ ರಾಜ್ಯಗಳ 'ಮುಖ್ಯಮಂತ್ರಿ ಪರಿಹಾರ ನಿಧಿ'ಗೆ ತೆಲುಗಿನ ಹೆಸರಾಂತ ನಟರು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ. ಸೂಪರ್ ಸ್ಟಾರ್ ಮಹೇಶ್ ಬಾಬು ಪ್ರತೀ ರಾಜ್ಯಕ್ಕೆ 50 ಲಕ್ಷ ರೂ., ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ನಟ ಚಿರಂಜೀವಿ ಎರಡೂ ರಾಜ್ಯಗಳಿಗೆ ತಲಾ 50 ಲಕ್ಷ ರೂ. ಮತ್ತು ಆಂಧ್ರದ ಉಪ ಮುಖ್ಯಮಂತ್ರಿ - ನಟ ಪವನ್ ಕಲ್ಯಾಣ್ ಅವರು ಆಂಧ್ರಕ್ಕೆ 1 ಕೋಟಿ ರೂ. ನೀಡುವುದಾಗಿ ತಿಳಿಸಿದ್ದಾರೆ.
ಇವರ ಬೆನ್ನಲ್ಲೇ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಒಟ್ಟು 2 ಕೋಟಿ ರೂ.ಗಳನ್ನು ಘೋಷಿಸಿದ್ದಾರೆ. ಈ ಮೊತ್ತ ಎರಡು ತೆಲುಗು ರಾಜ್ಯಗಳಿಗೆ ಹಂಚಿಕೆಯಾಗಲಿದೆ. ಸದ್ಯ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಗಳಿಗೆ ಈ ಹಣ ನೆರವಾಗಲಿದೆ. ಇನ್ನೂ ರಾಷ್ಟ್ರಪ್ರಶಸ್ತಿ ವಿಜೇತ ನಟ ಅಲ್ಲು ಅರ್ಜುನ್ ಕೂಡಾ 1 ಕೋಟಿ ರೂಪಾಯಿ ದೇಣಿಗೆ ಘೋಷಿಸಿದ್ದಾರೆ. ಆಂಧ್ರ ಮತ್ತು ತೆಲಂಗಾಣಕ್ಕೆ 50 ಲಕ್ಷ ರೂಪಾಯಿಯಂತೆ ಹಂಚಿಕೆಯಾಗಲಿದೆ. ನಟರ ದೇಣಿಗೆ ಪರಿಹಾರ ಕಾರ್ಯಗಳು ಚುರುಕುಗೊಳ್ಳಲು ನೆರವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಲ್ಲಿ ಹೆಚ್ಚು ಅಗತ್ಯವಿದೆಯೋ ಅಲ್ಲಿ ಈ ಹಣ ಬಳಕೆಯಾಗಲಿದೆ.
ಗುಂಟೂರು ಖಾರಮ್ ನಟ ಮಹೇಶ್ ಬಾಬು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. "ಎರಡೂ ತೆಲುಗು ರಾಜ್ಯಗಳಲ್ಲಿ ಪ್ರವಾಹ ಪರಿಣಾಮ ಬೀರಿದ್ದು, ನಾನು ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಸಿಎಂ ಪರಿಹಾರ ನಿಧಿಗೆ ತಲಾ 50 ಲಕ್ಷ ದೇಣಿಗೆ ನೀಡುತ್ತಿದ್ದೇನೆ. ಆಯಾ ಸರ್ಕಾರಗಳು ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಗಳನ್ನು ನಾವು ಒಟ್ಟಾಗಿ ಬೆಂಬಲಿಸೋಣ" ಎನ್ನುವ ಮೂಲಕ ಚೇತರಿಕೆ ಕಾರ್ಯಗಳಿಗೆ ಎಲ್ಲರೂ ಕೊಡುಗೆ ನೀಡುವಂತೆ ನಟ ಒತ್ತಾಯಿಸಿದರು.
ಹಿರಿಯ ನಟ ಚಿರಂಜೀವಿ ಟ್ವೀಟ್ ಮಾಡಿ, "ತೆಲುಗು ರಾಜ್ಯಗಳಲ್ಲಿ ಪ್ರವಾಹದ ಸೃಷ್ಟಿಸಿರುವ ಅವಾಂತರ ಅತೀವ ದುಃಖ ಕೊಟ್ಟಿದೆ. ಹತ್ತಾರು ಅಮಾಯಕರು ಕೊನೆಯುಸಿರೆಳೆದಿರುವುದು ದುರಂತ. ತೆಲುಗು ರಾಜ್ಯಗಳ ಮುಖ್ಯಮಂತ್ರಿಗಳ ನಿರ್ದೇಶನದ ಅಡಿಯಲ್ಲಿ ಎರಡೂ ಸರ್ಕಾರಗಳು ಪರಿಸ್ಥಿತಿಯನ್ನು ಸುಧಾರಿಸಲು ಶ್ರಮಿಸುತ್ತಿವೆ'' ಎಂದು ತಿಳಿಸಿದ್ದಾರೆ.