ಭಾರತದ ಅತ್ಯಂತ ಜನಪ್ರಿಯ ಹಿನ್ನೆಲೆ ಗಾಯಕ ಉದಿತ್ ನಾರಾಯಣ್ ಅವರ 'ಚುಂಬನ' ವಿವಾದಕ್ಕೀಡಾಗಿದೆ. ತಮ್ಮೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಂದಾದ ಮಹಿಳಾ ಅಭಿಮಾನಿಗಳಿಗೆ ಮುತ್ತಿಟ್ಟಿದ್ದಕ್ಕಾಗಿ ತೀವ್ರ ಟೀಕೆ ಎದುರಿಸುತ್ತಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆ ಗಾಯಕರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳೊಂದಿಗೆ ಆ ರೀತಿ ವರ್ತಿಸಿದ್ದಕ್ಕೆ ತಮಗೆ ಯಾವುದೇ ಬೇಸರವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
"ನನಗೆ, ನನ್ನ ಕುಟುಂಬಕ್ಕೆ, ನನ್ನ ದೇಶಕ್ಕೆ ಕೆಟ್ಟ ಹೆಸರು ತರುವ ಯಾವ ಕೆಲಸವನ್ನೂ ನಾನೆಂದಿಗೂ ಮಾಡಿಲ್ಲ. ಈಗ ಅಂತಹ ಕೆಲಸಗಳನ್ನು ಏಕೆ ಮಾಡಬೇಕು? ನನ್ನ ಅಭಿಮಾನಿಗಳೊಂದಿಗೆ ಉತ್ತಮ ಬಾಂಧವ್ಯವಿದೆ. ನೀವು ನೋಡಿದ ವೈರಲ್ ವಿಡಿಯೋ ನಮ್ಮ (ಅಭಿಮಾನಿಗಳೊಂದಿಗೆ) ನಡುವಿನ ಪ್ರೀತಿಗೆ ಸಾಕ್ಷಿ. ಅವರು ನನ್ನನ್ನು ಪ್ರೀತಿಸುವ ರೀತಿಯನ್ನು ನಾನು ಮೆಚ್ಚುತ್ತೇನೆ. ಅವರ ಮೇಲೆ ನನಗೂ ಪ್ರೀತಿಯಿದೆ" - ಗಾಯಕ ಉದಿತ್ ನಾರಾಯಣ್.
ಟೀಕಾಕಾರರಿಂದ ಹೆಚ್ಚು ಪ್ರಸಿದ್ಧನಾದೆ: "ಈ ವಿವಾದದ ಬಗ್ಗೆ ನಾನು ಚಿಂತೆ ಮಾಡೋದಿಲ್ಲ. ನನ್ನ ಮನಸ್ಸಿನಲ್ಲಿ ಯಾವುದೇ ಕೆಟ್ಟ ಉದ್ದೇಶಗಳಿಲ್ಲದಿದ್ದಾಗ ನಾನೇಕೆ ಅಸಮಾಧಾನಗೊಳ್ಳಬೇಕು?. ಕೆಲವರು ನಮ್ಮ ಶುದ್ಧ ಪ್ರೀತಿಯನ್ನು ತಪ್ಪಾಗಿ ನೋಡುತ್ತಿದ್ದಾರೆ. ಹಾಗೆ ಮಾಡುವವರ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ. ನಿಜ ಹೇಳಬೇಕೆಂದರೆ, ಅವರಿಂದಾಗಿ ನಾನು ಹೆಚ್ಚು ಪ್ರಸಿದ್ಧನಾದೆ. ಅದಕ್ಕಾಗಿ ಧನ್ಯವಾದಗಳು" ಎಂದು ತಿಳಿಸಿದರು.