ಕರ್ನಾಟಕ

karnataka

ETV Bharat / entertainment

'ಫೋಟೋ' ಅಂತರಂಗ ಬಿಚ್ಚಿಟ್ಟ ಪ್ರಕಾಶ್ ರಾಜ್: ಕೋವಿಡ್ ದಿನಗಳ ನೆನಪಿಸುವ ಚಿತ್ರವಿದು - Photo movie

ಬಹುಭಾಷಾ ನಟ‌ ಪ್ರಕಾಶ್ ರಾಜ್ ಅರ್ಪಿಸುತ್ತಿರುವ 'ಫೋಟೋ' ಸಿನಿಮಾ ಮಾರ್ಚ್ 15ರಂದು ಬಿಡುಗಡೆ ಆಗಲಿದೆ‌.

Etv Bharat
ಫೋಟೋ

By ETV Bharat Karnataka Team

Published : Mar 11, 2024, 11:31 AM IST

ಟೈಟಲ್ ಹಾಗೂ ಕಂಟೆಂಟ್​ನಿಂದ​​ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ 'ಫೋಟೋ'. ಬಹುಭಾಷಾ ನಟ‌ ಪ್ರಕಾಶ್ ರಾಜ್ ಅರ್ಪಿಸುತ್ತಿರುವ ಫೋಟೋ ಚಿತ್ರವು ಬಿಡುಗಡೆಗೆ ಸಜ್ಜಾಗಿದೆ‌. ಕೋವಿಡ್‌ನ ಆರಂಭ ಘಟ್ಟದಲ್ಲಿ ಕೇಂದ್ರ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಬಳಿಕ ವಲಸೆ ಕಾರ್ಮಿಕರು ಅನುಭವಿಸಿದ ಕಷ್ಟಗಳನ್ನು ಬಿಚ್ಚಿಡುವ ಸಿನಿಮಾ ಇದಾಗಿದೆ. ಸದ್ಯ 'ನಿಮ್ಮ ಸಂಗ' ಎಂಬ ಹಾಡನ್ನು ಖಾಸಗಿ ಹೋಟೆಲ್​ನಲ್ಲಿ ಅನಾವರಣ ಮಾಡಲಾಗಿದೆ. ಚಿತ್ರದ ಬಗ್ಗೆ ನಟ ಪ್ರಕಾಶ್ ರಾಜ್ ಹಾಗೂ ನಿರ್ದೇಶಕ ಉತ್ಸವ್​ ಗೋನವಾರ ಅವರು ಅನಿಸಿಕೆ‌ ಹಂಚಿಕೊಂಡರು.

ಪ್ರಕಾಶ್ ರಾಜ್ ಮಾತನಾಡಿ, ''ನಾನೇನು ದೊಡ್ಡ ಕೆಲಸ ಮಾಡಿಲ್ಲ. ಇಂತಹ ಕೆಲಸ‌ ಮಾಡಿಸಿಕೊಳ್ಳುವ ಹಾಗೂ ಈತರ ಸಾಥ್ ಕೊಡುವ ಅರ್ಹತೆ ಈ ಸಿನಿಮಾಗಿದೆ. ನಾನು ಸಿನಿಮಾ ನೋಡಿದೆ. ಬಹಳ ದಿನಗಳಿಂದ ನೋಡಬೇಕಿತ್ತು.‌ ಹಲವಾರು ಕಾರಣಗಳಿಂದ ನೋಡಲಾಗಿರಲಿಲ್ಲ. ಉತ್ಸವ್ ಹಾಗೂ ಅವರ ತಂಡದವರು ಪ್ರಕಾಶ್ ರೈಗೆ ತೋರಿಸಬೇಕು ಅಂದಾಗ, ನನಗೆ ಸಾರ್ಥಕ ಅನಿಸುತ್ತದೆ. ಚಿತ್ರ ನೋಡಿದ ಬಳಿಕ 15 ನಿಮಿಷ ನನಗೆ ಮಾತು ಬರಲಿಲ್ಲ. ಕೆಲವೊಮ್ಮೆ ಯಾಕೆ ಅಳುತ್ತೇವೆ ಅಂತಾ ಗೊತ್ತಾಗಲ್ಲ'' ಎಂದರು.

ಫೋಟೋ

''ಪ್ರಾಮಾಣಿಕ ಪ್ರಯತ್ನಕ್ಕೆ ಹೇಗೆ ರಿಯಾಕ್ಟ್ ಮಾಡಬೇಕು ಅನ್ನುವುದು ಗೊತ್ತಿರಲಿಲ್ಲ. ಈ ಸಿನಿಮಾ ಥಿಯೇಟರ್​​ಗೆ ಬರುತ್ತಿದೆ. ಒಬ್ಬ ಯುವಕರ ತಂಡ ಮಾಡಿರುವ ಚಿತ್ರವಿದು. ಯುವಕರು ಹಾಗೂ ಈ ರೀತಿಯ ಸಿನಿಮಾಗಳು ಬೆಳೆಯಬೇಕು. ಸಿನಿಮಾ ಜಗತ್ತಿನಲ್ಲಿ ಕಂಟೆಂಟ್ ಮುಖ್ಯ. ಇದೇ 15ಕ್ಕೆ ತೆರೆಗೆ ಬರುತ್ತಿದ್ದು, ಎಲ್ಲ ಮಲ್ಟಿಪ್ಲೆಕ್ಸ್​​ನಲ್ಲಿಯೂ ಚಿತ್ರ ಬಿಡುಗಡೆ ಮಾಡುತ್ತೇವೆ. ಸಿಂಗಲ್ ಥಿಯೇಟರ್​​ನಲ್ಲಿ ಮಾತ್ರವಲ್ಲ. ಮಾ.22ರ ನಂತರ ಉತ್ತರ ಕರ್ನಾಟಕದ ಸಿಂಗಲ್ ಥಿಯೇಟರ್​​ನಲ್ಲಿ ರಿಲೀಸ್ ಆಗಲಿದೆ. ಫೋಟೋ ಸಿನಿಮಾವನ್ನು ಎಲ್ಲರಿಗೂ ತಲುಪಿಸುವ ಉದ್ದೇಶದಿಂದ 150 ರೂ. ಟಿಕೆಟ್ ದರ ನಿಗದಿ ಮಾಡಿದ್ದೇವೆ'' ಎಂದು ತಿಳಿಸಿದರು.

ನಿರ್ದೇಶಕ ಉತ್ಸವ್ ಮಾತನಾಡಿ, ''ಫೋಟೋ ಸಿನಿಮಾ ರಿಲೀಸ್ ಮಾಡುವುದು ಹೇಗೆ ಎಂಬ ಪ್ರಶ್ನೆ ಮೂಡಿತ್ತು. ಪ್ರಕಾಶ್ ಸರ್ ಬಂದಿದ್ದು ನಮಗೆ ದೊಡ್ಡ ಶಕ್ತಿ. ಇದರಿಂದ ನನ್ನ ತರ ಸಿನಿಮಾ ಮಾಡುವವರಿಗೆ ನಂಬಿಕೆ ಮೂಡಲಿದೆ. ಮುಂದಿನ ಸಿನಿಮಾ ಮಾಡಲು ಪ್ರಕಾಶ್ ಸರ್ ಧೈರ್ಯ ತುಂಬಿದ್ದಾರೆ'' ಎಂದರು.

ಫೋಟೋ

'ನಿಮ್ಮ ಸಂಗ' ಎಂಬ ಜನಪದ ಶೈಲಿಯ ಹಾಡು ಫೋಟೋ ಸಿನಿಮಾದ ಅಂತರಂಗವನ್ನು ಬಿಚ್ಚಿಟ್ಟಿದೆ. ನಿರ್ದೇಶಕ ಉತ್ಸವ್ ಸಾಹಿತ್ಯ ಬರೆದಿರುವ ಹಾಡಿಗೆ ಶಿಲ್ಪಾ ಮುಡ್ಬಿ ಧ್ವನಿಯಾಗಿದ್ದಾರೆ. ಲಾಕ್​​ಡೌನ್ ಸಂದರ್ಭದಲ್ಲಿ ಜನರು ಎದುರಿಸಿದ ಸಂಕಷ್ಟಗಳನ್ನು ಹಾಡಿನಲ್ಲಿ ಕಟ್ಟಿಕೊಡಲಾಗಿದೆ.

ಫೋಟೋದಂತಹ ಸಾಮಾಜಿಕ ಕಳಕಳಿಯುಳ್ಳ ಸಿನಿಮಾ ಪ್ರೇಕ್ಷಕರಿಗೆ ತಲುಪಿಸಬೇಕು ಎಂಬ ಉದ್ದೇಶದಿಂದ ಚಿತ್ರದ ಟಿಕೆಟ್ ಕಡಿಮೆ ಬೆಲೆ ಮಾಡಲಾಗಿದೆ. ಮಲ್ಟಿಪ್ಲೆಕ್ಸ್​ನಲ್ಲಿ ಹಾಯಾಗಿ ಸಿನಿಮಾ ನೋಡಬೇಕು ಎಂಬುದು ಪ್ರೇಕ್ಷಕರ ಆಸೆ. ಆದರೆ ದುಬಾರಿಯಾದ ಸಿನಿಮಾಗಳ ಟಿಕೆಟ್​ ದರ ನೋಡಿ ಎಷ್ಟೋ ಜನರು ಮಲ್ಟಿಪ್ಲೆಕ್ಸ್​ ಕಡೆಗೆ ತಲೆಹಾಕುವುದಿಲ್ಲ. ಕುಟುಂಬ ಸಮೇತರಾಗಿ ಸಿನಿಮಾ ನೋಡಲು ಹೋದರೆ ಜೇಬಿಗೆ ಹೊರೆಯಾಗುತ್ತದೆ ಎಂದು ಚಿಂತಿಸುವ ವರ್ಗ ಕೂಡ ದೊಡ್ಡದಿದೆ. ಅಂಥವರಿಗೆಲ್ಲ 'ಫೋಟೋ' ತಂಡ ಗುಡ್​ ನ್ಯೂಸ್​ ಕೊಟ್ಟಿದ್ದು, ಕೇವಲ 150 ರೂ.ಗೆ ಟಿಕೆಟ್ ನಿಗದಿ ಮಾಡಿದೆ.

ಸಿನಿಮಾವನ್ನು 'ನಿರ್ದಿಗಂತ'ದ ಮೂಲಕ ಪ್ರಕಾಶ್ ರಾಜ್ ಪ್ರೆಸೆಂಟ್ ಮಾಡುತ್ತಿದ್ದು, ಇದರ ಮೂಲಕ ಉತ್ಸವ್ ಗೋನವಾರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. 'ಮಸಾರಿ ಟಾಕೀಸ್' ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣ ಆಗಿದೆ. ಮಹಾದೇವ ಹಡಪದ್, ಜಹಾಂಗೀರ್, ಸಂಧ್ಯಾ ಅರಕೆರೆ, ಮತ್ತು ವೀರೇಶ್ ಗೊನ್ವಾರ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ದಿನೇಶ್ ದಿವಾಕರನ್ ಛಾಯಾಗ್ರಹಣ, ರವಿ ಹಿರೇಮಠ್ ಶಬ್ದ ವಿನ್ಯಾಸ, ಶಿವರಾಜ್ ಮೆಹೂ ಸಂಕಲನ ಮಾಡಿದ್ದಾರೆ. ಟ್ರೇಲರ್‌ ಮೂಲಕ ಪ್ರೇಕ್ಷಕರಿಗೆ ಆಮಂತ್ರಣ‌ ಕೊಟ್ಟಿರುವ ಈ ಚಿತ್ರ ಮಾರ್ಚ್ 15ರಂದು ತೆರೆಕಾಣಲಿದೆ.

ಇದನ್ನೂ ಓದಿ:Oscars ಅವಾರ್ಡ್ಸ್ 2024: ಈ ವರ್ಷವೂ ಆಸ್ಕರ್​ ಅಂಗಳದಲ್ಲಿ ಸದ್ದು ಮಾಡಿದ ರಾಮ್​ ಚರಣ್​-ಜೂ ಎನ್​ಟಿಆರ್​

ABOUT THE AUTHOR

...view details