ಕನ್ನಡದ ಮೇರು ನಟರಾದ ಡಾ.ರಾಜ್‌ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಪ್ರಭಾಕರ್, ರವಿಚಂದ್ರನ್ ಅವರ ಕಾಲದಿಂದಲೂ ಕನ್ನಡ ಚಿತ್ರಮಂದಿರಗಳಲ್ಲಿ ತಮಿಳು, ತೆಲುಗು ಹಾಗು ಹಿಂದಿ ಸಿನಿಮಾಗಳ ಸದ್ದು ಜೋರಾಗಿದೆ. ಅದ್ಯಾವ ಮಟ್ಟಿಗಂದ್ರೆ, 1990ರಲ್ಲಿ ಬೆಂಗಳೂರಿನ ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರಗಳಾದ ಸಂತೋಷ್, ನರ್ತಕಿ, ತ್ರಿಭುವನ್, ಸ್ವಪ್ನ ಥಿಯೇಟರ್‌ಗಳು ಪರಭಾಷಾ ಸಿನಿಮಾಗಳ ಶಾಶ್ವತ ಚಿತ್ರಮಂದಿರಗಳಾಗಿದ್ದವು. ಆದರೆ ಕನ್ನಡ ಪ್ರೇಕ್ಷಕರು ಪರಭಾಷೆ ಸಿನಿಮಾಗಳ ಮೇಲಿನ ಒಲವು ಕಡಿಮೆ ಮಾಡಿದ್ದು ಹ್ಯಾಟ್ರಿಕ್ ಹೀರೋ ಶಿವ ರಾಜ್‌ಕುಮಾರ್ ಅಭಿನಯದ 'ಶಿವಸೈನ್ಯ' ಸಿನಿಮಾ ಬಿಡುಗಡೆ ಆದಾಗ.
ಹೌದು, ಕೆ.ಜಿ.ರಸ್ತೆಯ ಮುಖ್ಯ ಚಿತ್ರಮಂದಿರಗಳಲ್ಲಿ ಕನ್ನಡ ಸಿನಿಮಾಗಳಿಗೆ ಅವಕಾಶ ಸಿಗುತ್ತಿರಲಿಲ್ಲ. ಆ ಮಟ್ಟಿಗೆ ಪರಭಾಷಾ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದವು.
'ಆರ್ಯನ್' ಸಿನಿಮಾ ನಿರ್ಮಾಪಕ ಮತ್ತು ವಿತರಕ ವಸೀಮ್ ಹೇಳುವಂತೆ, 1996ರ ಏಪ್ರಿಲ್ 26ರಂದು ಶಿವ ರಾಜ್‌ಕುಮಾರ್ ಅಭಿನಯದ 'ಶಿವಸೈನ್ಯ' ನರ್ತಕಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿತ್ತು. ಬಹಳ ದಿನಗಳ ನಂತರ ಶಿವಣ್ಣನ ಸಿನಿಮಾ ಇಲ್ಲಿ ಬಿಡುಗಡೆ ಆಗಿದೆ ಎಂದು ಅಭಿಮಾನಿಗಳು ಹಬ್ಬದಂತೆ ಆಚರಿಸಿದ್ದರು. ಈ ಸಿನಿಮಾ ಆರಂಭಕ್ಕೂ ಮುನ್ನ ಕಮಲ್ ಹಾಸನ್ ಅಭಿನಯದ ಇಂಡಿಯನ್ ಸಿನಿಮಾದ ಟ್ರೇಲರ್ ಹಾಕಲಾಗಿತ್ತು. ಆಗ ಅಭಿಮಾನಿಗಳು ಕನ್ನಡ ಚಿತ್ರ ಹಾಕಿರಬೇಕಾದ್ರೆ ತಮಿಳು ಚಿತ್ರದ ಟ್ರೇಲರ್ ಹಾಕಿದ್ದೀರಾ ಎಂದು ರೊಚ್ಚಿಗೆದ್ದು ಚಿತ್ರಮಂದಿರವನ್ನು ಹಾನಿಗೊಳಿಸಿದ್ದರು. ಈ ಘಟನೆಯಿಂದ ಶಿವಸೈನ್ಯ ಸಿನಿಮಾದ ಮೊದಲ ಶೋ ಸೇರಿದಂತೆ ಇಡೀ ದಿನದ ಶೋ ಕ್ಯಾನ್ಸಲ್ ಆಗಿತ್ತು.
ಅಂದಿನಿಂದ ಸಂತೋಷ್, ನರ್ತಕಿ, ಸ್ವಪ್ನ ಥಿಯೇಟರ್‌ಗಳಲ್ಲಿ ತಮಿಳು ಸಿನಿಮಾಗಳನ್ನು ಹಾಕಬಾರದೆಂದು ಚಿತ್ರಮಂದಿರದ ಮಾಲೀಕರು ತೀರ್ಮಾನಿಸಿದರು. ಆದರೆ ಈ ಘಟನೆ ನಡೆದು ಒಂದು ತಿಂಗಳ ಬಳಿಕ ಅಂದ್ರೆ, 1996 ಮೇ 9ರಂದು ಕಮಲ್ ಹಾಸನ್ ನಟನೆಯ ಇಂಡಿಯನ್ ಸಿನಿಮಾವನ್ನು ಇದೇ ನರ್ತಕಿಯಲ್ಲಿ ರಿಲೀಸ್ ಮಾಡಲು ರೆಡಿಯಾಗಿದ್ದರು. ಆದರೆ ಅಭಿಮಾನಿಗಳ ಹೋರಾಟದಿಂದ ಅಂದು ಇಂಡಿಯನ್ ಚಿತ್ರ ಬಿಡುಗಡೆ ಆಗಿರಲಿಲ್ಲ. ಕಾಕತಾಳೀಯ ಎಂಬಂತೆ, 28 ವರ್ಷಗಳ ಬಳಿಕ ಇದೇ ನರ್ತಕಿ ಚಿತ್ರಮಂದಿರದಲ್ಲಿ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಸಿನಿಮಾ ಬಿಡುಗಡೆ ಆಗುತ್ತಿದೆ.
ಈ ಮೂಲಕ 1990ರಲ್ಲಿದ್ದ ಪರಭಾಷೆಯ ಸಿನಿಮಾಗಳ ಅಬ್ಬರ ಮತ್ತೆ ಇದೇ ಕೆ.ಜಿ.ರಸ್ತೆಯಲ್ಲಿ ಶುರುವಾಗುತ್ತಿದೆ. 90ರ ದಶಕದಲ್ಲಿ ಕೆ.ಜಿ.ರಸ್ತೆಯಲ್ಲಿರುವ ಚಿತ್ರಮಂದಿರಗಳಲ್ಲಿ ತಮಿಳು, ಹಿಂದಿ ಹಾಗೂ ತೆಲುಗು ಸಿನಿಮಾಗಳ ಹವಾ ಹೇಗಿತ್ತು ಎಂಬುದರ ಹಿನ್ನಲೆ ನೋಡಿದ್ರೆ ಆಶ್ಚರ್ಯ ಆಗುತ್ತೆ. 1993ರಲ್ಲಿ ಇದೇ ಕೆ.ಜಿ ರಸ್ತೆಯಲ್ಲಿರುವ ನರ್ತಕಿ ಪಕ್ಕದ ಸ್ವಪ್ನ ಚಿತ್ರಮಂದಿರಲ್ಲಿ ಪ್ರಭುದೇವ ಹಾಗೂ ನಗ್ಮಾ ಅಭಿನಯದ ತಮಿಳಿನ ಕಾದಲನ್ ಸಿನಿಮಾ ಬಿಡುಗಡೆಯಾಗಿ 25 ವಾರಗಳ ಕಾಲ ಪ್ರದರ್ಶನಗೊಳ್ಳುವ ಮೂಲಕ ಚಿತ್ರಮಂದಿರಗಳ ಮಾಲೀಕರ ಜೇಬು ತುಂಬಿಸಿತ್ತು.