ಒಡಿಶಾದ ಭುವನೇಶ್ವರದಲ್ಲಿರುವ ಕೆ.ಐ.ಐ.ಟಿ ವಿಶ್ವವಿದ್ಯಾನಿಲಯದ 19ರ ಹರೆಯದ ವಿದ್ಯಾರ್ಥಿನಿ ತ್ರಿಷ್ಣಾ ರೇ (Trishna Ray) 2024ರ ಮಿಸ್ ಟೀನ್ ಯೂನಿವರ್ಸ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಇದೊಂದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ.
ನವೆಂಬರ್ 1 ರಿಂದ 9ರ ವರೆಗೆ ದಕ್ಷಿಣ ಆಫ್ರಿಕಾದ ಕಿಂಬರ್ಲಿಯಲ್ಲಿ ನಡೆದ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ಇದಾಗಿತ್ತು. ಪೆರು, ದಕ್ಷಿಣ ಆಫ್ರಿಕಾ, ಬ್ರೆಜಿಲ್, ಕೀನ್ಯಾ, ಪೋರ್ಚುಗಲ್ ಮತ್ತು ನೆದರ್ಲ್ಯಾಂಡ್ಸ್ ಸೇರಿದಂತೆ 10 ಫೈನಲಿಸ್ಟ್‌ಗಳು ಸ್ಪರ್ಧಿಸಿದ್ದರು. ಈ ಪ್ರತಿಭಾನ್ವಿತ ಸ್ಪರ್ಧಿಗಳ ಗುಂಪಿನಲ್ಲಿ, ತ್ರಿಷ್ಣಾ ರೇ ಅವರ ಪ್ರತಿಭೆ ಮತ್ತು ಸೌಂದರ್ಯದಿಂದ ಪ್ರತಿಷ್ಠಿತ ಕಿರೀಟ ಮುಡಿಗೇರಿಸಿಕೊಳ್ಳಲು ಸಾಧ್ಯವಾಯಿತು. ಪೆರು ರಾಷ್ಟ್ರದ ಆನ್ನೆ ಥಾರ್ಸೆನ್ ಮತ್ತು ನಮೀಬಿಯಾದ ಪ್ರೆಶಿಯಸ್ ಆಂಡ್ರೆವ್ ಮೊದಲ ಮತ್ತು ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.
ಕೆ.ಐ.ಐ.ಟಿ ವಿಶ್ವವಿದ್ಯಾನಿಲಯದಲ್ಲಿ ಫ್ಯಾಷನ್ ತಂತ್ರಜ್ಞಾನ ವಿದ್ಯಾಭ್ಯಾಸ ಪಡೆಯುತ್ತಿರುವ ತ್ರಿಷ್ಣಾ ರೇ, ಕರ್ನಲ್ ದಿಲ್ಲಿಪ್ ಕುಮಾರ್ ರೇ ಮತ್ತು ರಾಜಶ್ರೀ ರೇ ದಂಪತಿಯ ಪುತ್ರಿ. ಈ ಸಾಧನೆ ಅಷ್ಟು ಸುಲಭವಾಗಿರಲಿಲ್ಲ. ಅವರ ಪಯಣ ಅಡೆತಡೆಗಳಿಲ್ಲದೇ ಏನು ಸಾಗಲಿಲ್ಲ. ವೀಸಾ ಸಮಸ್ಯೆಯಿಂದಾಗಿ ಕೊಲಂಬಿಯಾ ಮತ್ತು ಡೊಮಿನಿಕನ್ ರಿಪಬ್ಲಿಕ್‌ನಲ್ಲಿ ಸ್ಪರ್ಧಿಸುವ ಅವಕಾಶಗಳನ್ನು ಕಳೆದುಕೊಂಡಿರುವುದು ಸೇರಿದಂತೆ ಈ ಹಿಂದೆ ಕೆಲ ಸವಾಲುಗಳನ್ನು ಎದುರಿಸಿಯೇ ಈ ಹಂತ ತಲುಪಿದ್ದಾರೆ. ಸಾಧಿಸಬೇಕೆಂಬ ಹಠ, ಪರಿಶ್ರಮ ಹಿನ್ನೆಲೆ, ಫೈನಲಿ ದಕ್ಷಿಣ ಆಫ್ರಿಕಾದಲ್ಲಿ ಅಭೂತಪೂರ್ವ ಯಶಸ್ಸನ್ನು ಕಂಡಿದ್ದಾರೆ.