ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಪಿ.ಆರ್.ಕೆ ಪ್ರೊಡಕ್ಷನ್ಸ್ ಮೂಲಕ ಸದಾ ಹೊಸ ಪ್ರಯತ್ನಗಳಿಗೆ ಬೆನ್ನುತಟ್ಟುವ ಕೆಲಸ ಮಾಡುತ್ತಿದ್ದರು. ಈಗ ಆ ಪರಂಪರೆಯನ್ನು ಅಶ್ವಿನಿ ಪುನೀತ್ ರಾಜಕುಮಾರ್ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಪಿ.ಆರ್.ಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'O2' ಚಿತ್ರ ತೆರೆಕಾಣಲು ರೆಡಿಯಾಗಿದ್ದು, ಸಿನಿಮಾ ಬಗ್ಗೆ ಚಿತ್ರತಂಡವು ಕೆಲ ಇಂಟ್ರೆಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದೆ.
ನಿರ್ದೇಶಕರಾದ ಪ್ರಶಾಂತ್ ರಾಜ್ ಹಾಗೂ ರಾಘವ್ ನಾಯಕ್ ಮಾತನಾಡಿ, 'ಮಾಯಾ ಬಜಾರ್' ಚಿತ್ರದ ರಾಧಾಕೃಷ್ಣ ಅವರ ಮೂಲಕ ನಮಗೆ ಪುನೀತ್ ರಾಜ್ಕುಮಾರ್ ಪರಿಚಯವಾಯಿತು. ಈ ಚಿತ್ರದ ಕಥೆ ಕೇಳಿದ್ದ ಪುನೀತ್ ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ನಿರ್ಮಾಣಕ್ಕೆ ಮುಂದಾದರು. 'O2' ಪ್ರಮುಖವಾಗಿ ಮೆಡಿಕಲ್ ಕುರಿತಾದ ಸಿನಿಮಾ. ಹೃದಯ ಸ್ತಂಭನವಾಗಿ ಸಾವಿನಂಚಿಗೆ ತಲುಪಿದ ವ್ಯಕ್ತಿಯನ್ನು '02' ಡ್ರಗ್ ಮೂಲಕ ಬದುಕಿಸಬಹುದು. ಆ ಹೊಸ ಆವಿಷ್ಕಾರವನ್ನು ನಮ್ಮ ಚಿತ್ರದಲ್ಲಿ ಶ್ರದ್ಧಾ (ನಾಯಕಿ ಆಶಿಕಾ ರಂಗನಾಥ್) ಮಾಡುತ್ತಾರೆ ಎಂದರು.
'02' ಡ್ರಗ್ ಬಗ್ಗೆ ಸಂಶೋಧನೆ ನಡೆಸುವಾಗ ಶ್ರದ್ಧಾ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಾರೆ. ಅಲ್ಲದೆ, ನಮ್ಮ ಚಿತ್ರದಲ್ಲಿ ಪ್ರೀತಿ, ಅನಿರೀಕ್ಷಿತ ತಿರುವುಗಳು ಹಾಗೂ ಮನರಂಜನೆ ಕೂಡ ಇದೆ. ಕನ್ನಡದಲ್ಲಿ ಈ ರೀತಿಯ ಕಥೆ ವಿರಳ ಎನ್ನಬಹುದು. ಅವಕಾಶ ನೀಡಿದ ಪಿ.ಆರ್.ಕೆ ಪ್ರೊಡಕ್ಷನ್ಸ್ ಸಂಸ್ಥೆಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು ಎಂದು ರಾಘವ್ ಹೇಳಿದರು. ರಾಘವ್ ನಾಯಕ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿಯೂ ಅಭಿನಯಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿ, ''ಇದು ಅಪ್ಪು ಅವರು ಇದ್ದಾಗ ಕೇಳಿದ ಕಥೆ. ನಾನು ಹಾಗೂ ಅವರು ಇಬ್ಬರೂ ಒಟ್ಟಿಗೆ ಈ ಕಥೆ ಕೇಳಿದ್ದೆವು. ಇದು ಅಪ್ಪು ಅವರು ಕೇಳಿದ ಕೊನೆಯ ಕಥೆಯಾಗಿದೆ. ಈಗ 'O2' ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಹಾಡು ಹಾಗೂ ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯಿತು. ಸದ್ಯದಲ್ಲೇ ಎರಡು ಚಿತ್ರಗಳನ್ನು ನಮ್ಮ ಸಂಸ್ಥೆಯಿಂದ ಆರಂಭಿಸಲಿದ್ದೇವೆ'' ಎಂದರು.