ಬೆಂಗಳೂರು: ದೈವಾರಾಧನೆ ಕಥೆಯನ್ನೊಳಗೊಂಡು ಬಂದ 'ಕಾಂತಾರ' ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸಿದೆ. ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸನ್ನು ಕಂಡಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲೂ ಕಮಾಲ್ ಮಾಡಿದೆ. ಅದರಂತೆ ದೈವ ಕುರಿತು ಕನ್ನಡದಲ್ಲಿ ಮತ್ತೊಂದು ಚಿತ್ರ ಬರುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ.
''ಕೊರಗಜ್ಜ'' ಶೀರ್ಷಿಕೆಯ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆಯಾದರೂ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಈ ಹಿನ್ನೆಲೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಲೇಖಕ ಮತ್ತು ಈ ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಮಾತನಾಡಿ, ''ತಮ್ಮ ಸಿನಿಮಾವನ್ನು ವಿರೋಧಿಸಲು ಯಾವುದೇ ಸೂಕ್ತ ಕಾರಣವಿಲ್ಲ, ನಾನೂ ಕೂಡಾ ಕೊರಗಜ್ಜನ ಭಕ್ತ'' ಎಂದು ಹೇಳಿಕೊಂಡಿದ್ದಾರೆ.
ಅದ್ಬುತ ಕಥೆಯನ್ನು ಜಗತ್ತಿಗೆ ಹೇಳಲು ಬಯಸುತ್ತೇನೆ:"ತುಳುನಾಡಿನ ದೈವಾರಾಧನೆ ಸಂಪ್ರದಾಯದ ಪ್ರಮುಖ ದೈವಗಳಲ್ಲಿ ಒಂದಾದ ಕೊರಗಜ್ಜನ ಅದ್ಭುತ ಕಥೆಯನ್ನು ನಾನು ಈ ಜಗತ್ತಿಗೆ ಹೇಳಲು ಬಯಸುತ್ತೇನೆ" ಎಂದು ಅತ್ತಾವರ್ ಸುದ್ದಿ ಸಂಸ್ಥೆಗೆ ತಿಳಿಸಿದರು.
ಸರಿಸುಮಾರು 4,000 ದೈವಗಳನ್ನು ಪೂಜಿಸುವ ರಾಜ್ಯದ ಒಂದು ಪ್ರದೇಶದ ಜನರು, ವಿಶೇಷವಾಗಿ ತುಳುನಾಡಿನವರು (ಕೆಲವರು) ತಮ್ಮ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುತ್ತಾರೆ ಎಂದು ಆರೋಪಿಸಿ ಈ ಚಿತ್ರವನ್ನು ನಿಷೇಧಿಸುವಂತೆ ಕರೆ ನೀಡಿದ್ದಾರೆ.
ನಿರ್ದೇಶಕರ ಸ್ಪಷ್ಟನೆ ಹೀಗಿದೆ;''ಸಿನಿಮಾ ಶೂಟಿಂಗ್ ವೇಳೆಯೂ ಕೆಲವರು ತಮ್ಮ ಮೇಲೆ ಹಲ್ಲೆ ನಡೆಸಿದ ಹಿನ್ನೆಲೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದೆವು. ಅಂದು ಶೂಟಿಂಗ್ ನಿಲ್ಲಿಸಬೇಕಾಯಿತು. ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದೇನೆ. ಏಕೆ ನಮ್ಮ ಮೇಲೆ ಆ ರೀತಿ ಹಲ್ಲೆಯಾಯಿತು ಎಂಬದು ನಮಗೆ ನಿಜವಾಗಿಯೂ ಗೊತ್ತಿಲ್ಲ. ನಾನು ದೈವಾರಾಧನೆ ಅಥವಾ ದೇವರನ್ನು ಅಪಹಾಸ್ಯ ಮಾಡುವ ಉದ್ದೇಶ ಹೊಂದಿಲ್ಲ. ನಾನು ದೈವಭಕ್ತ, ಚಿತ್ರೀಕರಣ ಪ್ರಾರಂಭವಾಗುವ ಮೊದಲು ಭೂತ ಕೋಲದಲ್ಲಿ ಭಾಗಿಯಾಗಿ ಕೊರಗಜ್ಜನಿಂದ ಅನುಮತಿ ಪಡೆದುಕೊಂಡಿದ್ದೇನೆ" - ನಿರ್ದೇಶಕ ಸುಧೀರ್ ಅತ್ತಾವರ್.