ಕನ್ನಡ ಚಿತ್ರರಂಗದಲ್ಲಿ ಪ್ರತೀ ವರ್ಷವೂ ನೂರಾರು ಸಿನಿಮಾಗಳು ನಿರ್ಮಾಣ ಆಗುತ್ತವೆ. ಕೆಲ ಚಿತ್ರಗಳು ಸೂಪರ್ ಡೂಪರ್ ಹಿಟ್ ಆದ್ರೆ, ಹಲವು ಚಿತ್ರಗಳು ಸಾಧಾರಣ ಪ್ರದರ್ಶನ ಕಾಣುತ್ತವೆ. ಪ್ರತೀ ಸಿನಿಮಾಗಳೂ ಕೂಡ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಾಣುತ್ತವೆ. ಆದ್ರೆ ತೆರೆಕಂಡು ಎಷ್ಟೇ ವರ್ಷಗಳಾದ್ರೂ ಕೂಡ ಕೆಲ ಚಿತ್ರಗಳು ಪ್ರೇಕ್ಷಕರ ಅಚ್ಚುಮೆಚ್ಚಿನ ಸಿನಿಮಾವಾಗಿ ಉಳಿದುಕೊಂಡಿರುತ್ತವೆ. ಆ ಸಾಲಿನಲ್ಲಿ 'ರಂಗಿತರಂಗ' ಸಿನಿಮಾ ಕೂಡ ಒಂದು.
ರಂಗಿತರಂಗ ಸಿನಿಮಾಗೆ 9 ವರ್ಷ: ಸ್ಯಾಂಡಲ್ವುಡ್ನಲ್ಲಿ ''ರಂಗಿತರಂಗ'' ಚಿತ್ರ ಮಾಡಿದ ಸಾಧನೆ ದೊಡ್ಡದು. ಈ ಸಿನಿಮಾ ಬಿಡುಗಡೆಯಾಗಿ ಹೆಚ್ಚುಕಮ್ಮಿ 9 ವರ್ಷಗಳಾಗಿವೆ. ಬಾಹುಬಲಿಯಂತಹ ದೊಡ್ಡ ಸಿನಿಮಾ ತೆರೆಕಂಡ ಸಂದರ್ಭ 'ರಂಗಿತರಂಗ' ಕೂಡ ಬಿಡುಗಡೆ ಆಗಿ, ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿತ್ತು. ಬಾಕ್ಸ್ ಆಫೀಸ್ ವಿಚಾರದಲ್ಲಿ ಗೆಲುವಿನ ನಗೆ ಬೀರಿತ್ತು.
ನಿರೂಪ್ ಭಂಡಾರಿ - ಸಾಯಿಕುಮಾರ್ ಸಿನಿಮಾ: ಈ ಸಿನಿಮಾದಲ್ಲಿ ನಾಯಕ ನಟನಾಗಿ ಅಮೋಘವಾಗಿ ಅಭಿನಯಿಸಿದ್ದ ನಿರೂಪ್ ಭಂಡಾರಿ ಎದುರು ಖಳನಾಯಕನಾಗಿ ಸಾಯಿಕುಮಾರ್ ಅತ್ಯದ್ಭುತ ಪ್ರದರ್ಶನ ತೋರಿಸಿದ್ದರು. ಪೋಸ್ಟ್ ಮ್ಯಾನ್ ಕಾಳಿಂಗನಾಗಿ ಕಾಣಿಸಿಕೊಂಡಿದ್ದ ಸಾಯಿಕುಮಾರ್ ಹಾಗೂ ನಿರೂಪ್ ಮತ್ತೆ ಸಿನಿಮಾವೊಂದಕ್ಕೆ ಕೈ ಜೋಡಿಸಿದ್ದಾರೆ.
ಫೆಬ್ರವರಿ 6 ಶೀರ್ಷಿಕೆ ಅನಾವರಣ: ಹೌದು, ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಯುವ ಪ್ರತಿಭೆ ಸಚಿನ್ ವಾಲಿ ಸಾರಥ್ಯದ ಹೊಸ ಸಿನಿಮಾದಲ್ಲಿ ನಿರೂಪ್ ಭಂಡಾರಿ ಹಾಗೂ ಸಾಯಿಕುಮಾರ್ ಒಟ್ಟಿಗೆ ನಟಿಸುತ್ತಿದ್ದಾರೆ. ಈಗಾಗಲೇ ನಟ ಸಾಯಿಕುಮಾರ್ ಚಿತ್ರತಂಡ ಸೇರಿದ್ದಾರೆ. ಬಹಳ ವರ್ಷಗಳ ನಂತರ ಈ ಕಾಂಬೋ ಮತ್ತೆ ಒಂದಾಗಿರುವುದು ಸಿನಿಮಾ ಮೇಲಿನ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಸಾಯಿಕುಮಾರ್ ಅವರು ನಿರೂಪ್ ಅವರ ತಂದೆ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಚಿತ್ರದ ಶೀರ್ಷಿಕೆ ಮತ್ತು ಫಸ್ಟ್ ಲುಕ್ ಫೆಬ್ರವರಿ 6ಕ್ಕೆ ಅನಾವರಣಗೊಳ್ಳಲಿದೆ.
ಇದನ್ನೂ ಓದಿ:'ಮಾದೇವ'ನ ಮಾಸ್ ಟೀಸರ್ಗೆ ಫ್ಯಾನ್ಸ್ ಫಿದಾ.. ಭರ್ಜರಿ ಆ್ಯಕ್ಷನ್ ಸೀನ್ನಲ್ಲಿ ಮರಿ ಟೈಗರ್ ವಿನೋದ್ ಪ್ರಭಾಕರ್
ಸತ್ಯ ಮತ್ತು ಸುಳ್ಳಿನ ನಡುವೆ ಇರುವ ಸಾಮಾಜಿಕ ಬದ್ಧತೆ ಸುತ್ತ ಸಾಗುವ ಕಾಮಿಡಿ ಮತ್ತು ಫ್ಯಾಮಿಲಿ ಎಂಟರ್ಟೈನರ್ ಕಥಾಹಂದರವುಳ್ಳ ಚಿತ್ರವಿದು. ಅಂಕೆತ್ ಸಿನಿಮಾಸ್ ಅಡಿಯಲ್ಲಿ ಅಂಕಿತ್ ಸೋನಿಗಾರ ಈ ಚಿತ್ರವನ್ನು ನಿರ್ಮಿಸಿಸುತ್ತಿದ್ದು, ಪ್ರಶಾಂತ್ ಮುಲಗೆ ಸಹ ನಿರ್ಮಾಪಕರಾಗಿ ಜವಾಬ್ದಾರಿ ಹೊತ್ತಿದ್ದಾರೆ. ಸಚಿನ್ ಬಸ್ರೂರ್ ಸಂಗೀತ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ, ಉಲ್ಲಾಸ್ ಹೈದೂರು ಕಲಾ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಈ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ.
ಇದನ್ನೂ ಓದಿ:'ಬಿಗ್ ಬಾಸ್ ಗೆಲ್ಲೋರು ಯಾರು'? ಎಲಿಮಿನೇಟ್ ಆದ ಸ್ಪರ್ಧಿಗಳು ಏನಂತಾರೆ!