ಕನ್ನಡ ಚಿತ್ರರಂಗದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ವುಡ್ ಮಾತ್ರವಲ್ಲದೇ ಬಹುಭಾಷಾ ನಟರ ಜೊತೆ ಆತ್ಮೀಯ ಗೆಳತನ ಹೊಂದಿದ್ದಾರೆ. ಈ ಮಾತಿಗೆ ಸಾಕ್ಷಿಯಾಗಿ ತೆಲುಗು ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಸ್ಟಾರ್ಡಮ್ ಸಂಪಾದಿಸಿರುವ ನ್ಯಾಚುರಲ್ ಸ್ಟಾರ್ ನಾನಿ ಇತ್ತೀಚೆಗೆ ಸ್ಯಾಂಡ್ವುಡ್ನ ಈ ಸ್ಟಾರ್ ನಟರನ್ನು ಭೇಟಿ ಮಾಡಿದ್ದರು. ಈ ಭೇಟಿಯ ಫೋಟೋಗಳೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿವೆ.
ಟಾಲಿವುಡ್ನ ನ್ಯಾಚುರಲ್ ಸ್ಟಾರ್ ಖ್ಯಾತಿಯ ನಾನಿ ಅಭಿನಯದ 'ಸರಿಪೋದಾ ಶನಿವಾರಂ' ಸಿನಿಮಾ ಕನ್ನಡದಲ್ಲಿ 'ಸೂರ್ಯನ ಸಾಟರ್ಡೆ' ಹೆಸರಲ್ಲಿ ಇಂದು ಬಿಡುಗಡೆ ಆಗಿದೆ. ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಪ್ರಚಾರಕ್ಕೆಂದು ನಟ ನಾನಿ ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದರು. ಪ್ರಚಾರದ ಅಂಗವಾಗಿ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ನಾನಿ, ಕನ್ನಡ ಸಿನಿಮಾಗಳು ಹಾಗೂ ಪ್ರಶಸ್ತಿಗಳ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿತ್ರದ ಪ್ರಚಾರದ ಬಳಿಕ ನಾನಿ ದೊಡ್ಮನೆಗೂ ಭೇಟಿ ನೀಡಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅವರನ್ನು ಭೇಟಿ ಮಾಡಿ ತಮ್ಮ ಚಿತ್ರದ ಬಗ್ಗೆ ಒಂದಷ್ಟು ಮಾತಕತೆ ನಡೆಸಿದರು. ಈ ಹಿಂದೆ ನಾನಿ ನಟನೆಯ 'ಹಾಯ್ ನಾನ್ನ' ಸಿನಿಮಾ ವೀಕ್ಷಿಸಿ ಶಿವಣ್ಣ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದರು.
'ಈಗ' ಸಿನಿಮಾದಲ್ಲಿ ಸುದೀಪ್ ಜೊತೆ ನಟಿಸಿರುವ ನಾನಿ, ಕಿಚ್ಚನ ಮನೆಗೂ ಭೇಟಿ ಕೊಟ್ಟಿದ್ದರು. ಹೆಬ್ಬುಲಿ ಜೊತೆ ಕೆಲ ಹೊತ್ತು ಕಾಲ ಕಳೆದು ಸಿನಿಮಾಗಳ ಬಗ್ಗೆ ಮಾತಕತೆ ನಡೆಸಿದರು. ಈ ಸಂತೋಷಕರ ಸಮಯದಲ್ಲಿ 'ಈಗ' ಚಿತ್ರದ ಶೂಟಿಂಗ್ ಕ್ಷಣಗಳನ್ನು ನೆನಪಿಸಿಕೊಂಡರು.