ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳ ಟೈಟಲ್ ಮರುಬಳಕೆ ಸಾಮಾನ್ಯವಾಗಿದೆ. ಅನಂತ್ ನಾಗ್ ಹಾಗೂ ಜೂಲಿ ಲಕ್ಷ್ಮೀ ಅಭಿನಯದ 'ನಾ ನಿನ್ನ ಬಿಡಲಾರೆ' ಇಂದಿಗೂ ಸಿನಿಪ್ರಿಯರ ಅಚ್ಚುಮೆಚ್ಚಿನ ಚಿತ್ರ. ಇದೀಗ ಇದೇ ಚಿತ್ರದ ಶೀರ್ಷಿಕೆ ಮರು ಬಳಕೆ ಆಗುತ್ತಿದೆ.
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ಹೇಮಂತ್ ಹೆಗ್ಡೆ ಈ ಟೈಟಲ್ ಇಟ್ಟುಕೊಂಡು ಹೊಸ ಸಿನಿಮಾ ಮಾಡುತ್ತಿದ್ದಾರೆ. 'ನಾ ನಿನ್ನ ಬಿಡಲಾರೆ' ಮುಹೂರ್ತ ಸಮಾರಂಭ ಪದ್ಮನಾಭನಗರದ ಶ್ರೀ ಲಕ್ಷ್ಮೀಕಾಂತ ದೇವಸ್ಥಾನದಲ್ಲಿ ನೆರವೇರಿದೆ.
ಚಿತ್ರದ ಮೊದಲ ಸನ್ನಿವೇಶಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಕ್ಲಾಪ್ ಮಾಡಿದರು. ನೈಸ್ ಸಂಸ್ಥೆಯ ಅಶೋಕ್ ಖೇಣಿ ಕ್ಯಾಮರಾಗೆ ಚಾಲನೆ ಕೊಟ್ಟರು.
ಮುಹೂರ್ತದ ಬಳಿಕ ಮಾತನಾಡಿದ ನಟ-ನಿರ್ದೇಶಕ ಹೇಮಂತ್ ಹೆಗ್ಡೆ, "ಇದೊಂದು ಹಾರರ್ ಜಾನರ್. ಹಿಂದಿನ ಸೂಪರ್ ಹಿಟ್ ಚಿತ್ರದ ಶೀರ್ಷಿಕೆ ನಮ್ಮ ಚಿತ್ರದ ಕಥೆಗೆ ಸೂಕ್ತವಾಗಿದೆ. ಹಾಗಾಗಿ, 'ನಾ ನಿನ್ನ ಬಿಡಲಾರೆ' ಎಂದು ಹೆಸರಿಟ್ಟಿದ್ದೇವೆ. ಆದರೆ ಹಳೆಯ ನಾ ನಿನ್ನ ಬಿಡಲಾರೆ ಕಥೆಯೇ ಬೇರೆ, ಈ ಚಿತ್ರದ ಕಥೆಯೇ ಬೇರೆ. ಕನ್ನಡದಲ್ಲಿ ಒಂದೊಳ್ಳೆ ಹಾರರ್ ಚಿತ್ರ ಬಂದು ಬಹಳ ಸಮಯವಾಗಿದೆ. ಹಾಗಾಗಿ ಹಾರರ್ ಜಾನರ್ ಆಯ್ಕೆ ಮಾಡಿಕೊಂಡಿದ್ದೇವೆ. ನನ್ನ ಹೆಂಡತಿಯ ಪಾತ್ರದಲ್ಲಿ ಅಪೂರ್ವ ನಟಿಸುತ್ತಿದ್ದಾರೆ. ಭಾವನಾ ರಾಮಣ್ಣ ದೆವ್ವದ ಪಾತ್ರ ಮಾಡುತ್ತಿದ್ದಾರೆ. ಕಿಶೋರ್, ಮಕರಂದ್ ದೇಶಪಾಂಡೆ, ಶಂಕರ್ ಅಶ್ವಥ್, ಶರತ್ ಲೋಹಿತಾಶ್ವ, ಸುಚೇಂದ್ರ ಪ್ರಸಾದ್, ರೇವಣ್ಣ ಸಿದ್ದಯ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ. ಖ್ಯಾತ ನಟ ನಾಜರ್ ಅವರೊಂದಿಗೂ ಮಾತುಕತೆ ನಡೆಯುತ್ತಿದೆ" ಎಂದರು.