ಕರ್ನಾಟಕ

karnataka

ETV Bharat / entertainment

ವಿದೇಶದಲ್ಲಿ ಉಪೇಂದ್ರ ಸಾರಥ್ಯದ 'ಯುಐ' ಚಿತ್ರತಂಡ: ಸ್ಪೆಷಲ್​​ ವಿಡಿಯೋ ಹಂಚಿಕೊಂಡ ಅಜನೀಶ್​​ ಲೋಕನಾಥ್ - Upendra UI Film Team - UPENDRA UI FILM TEAM

'ಯು ಐ', ಈ ಸಾಲಿನ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಬುದ್ಧಿವಂತ ನಟ ನಿರ್ದೇಶಕ ಖ್ಯಾತಿಯ ರಿಯಲ್​ ಸ್ಟಾರ್​ ಉಪೇಂದ್ರ ಅವರು ಅಭಿನಯಿಸೋ ಜೊತೆಗೆ ಆ್ಯಕ್ಷನ್​ ಕಟ್​​ ಹೇಳಿರುವ ಸಿನಿಮಾ. ಇತ್ತೀಚೆಗಷ್ಟೇ ಚಿತ್ರದ 'ಸೌಂಡ್​ ಆಫ್​ ಯುಐ' ಎಂಬ ವಿಡಿಯೋ ಅನಾವರಣಗೊಂಡಿತ್ತು. ಇದೀಗ ಸಂಗೀತ ನಿರ್ದೇಶಕ ಬಿ ಅಜನೀಶ್​ ಲೋಕನಾಥ್​​​ ವಿಶೇಷ ವಿಡಿಯೋ ಶೇರ್ ಮಾಡೋ ಮುಖೇನ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದಾರೆ.

'Sound of UI' Poster
'ಸೌಂಡ್​ ಆಫ್​ ಯುಐ' ಪೋಸ್ಟರ್ (Film Poster, Ajaneesh Loknath IG)

By ETV Bharat Karnataka Team

Published : Aug 30, 2024, 12:54 PM IST

'ಯು ಐ', ಸ್ಯಾಂಡಲ್​ವುಡ್​​​ನ ರಿಯಲ್​​ ಸ್ಟಾರ್​​​ ಉಪೇಂದ್ರ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಚಿತ್ರ. ಕನ್ನಡ ಚಿತ್ರರಂಗವೀಗ ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಂಡಿರುವ ಹಿನ್ನೆಲೆ, ಈ ಸಿನಿಮಾ ಮೇಲಿನ ಕುತೂಹಲ, ನಿರೀಕ್ಷೆಗಳು ದೊಡ್ಡ ಮಟ್ಟದಲ್ಲೇ ಇವೆ. ಅಷ್ಟಕ್ಕೂ ಇದು ಬುದ್ಧಿವಂತ ನಟ - ನಿರ್ದೇಶಕ ಖ್ಯಾತಿಯ ಉಪೇಂದ್ರ ಸಾರಥ್ಯದ ಸಿನಿಮಾವಲ್ಲವೇ. ಹಾಗಾಗಿ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿದೆ. ಅಕ್ಟೋಬರ್​ನಲ್ಲಿ ತೆರೆಕಾಣಲಿರುವ ದಿ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾದ 'ಸೌಂಡ್​ ಆಫ್​ ಯುಐ' ಇತ್ತೀಚೆಗಷ್ಟೇ ಅನಾವರಣಗೊಂಡಿತ್ತು. ಇದೀಗ ಸಿನಿಮಾದ ಸಂಗೀತ ನಿರ್ದೇಶಕ ಬಿ ಅಜನೀಶ್​ ಲೋಕನಾಥ್​​​ ವಿಶೇಷ ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಪ್ರೇಕ್ಷಕರ ಕುತೂಹಲವನ್ನು ದ್ವಿಗುಣಗೊಳಿಸಿದ್ದಾರೆ.

ಕೆಲ ದಿನಗಳ ಹಿಂದೆ ಯು ಐ ಚಿತ್ರತಂಡ ಹಂಗೇರಿಯ ಬುಡಾಪೆಸ್ಟ್​​​ಗೆ ತೆರಳಿತ್ತು. ಕೆಲ ದಿನಗಳ ಕಾಲ ಅಲ್ಲೇ ಉಳಿದುಕೊಂಡು ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿತ್ತು. ಚಿತ್ರದ ಬಿಜಿಎಂ, ಸಾಂಗ್ಸ್​​​ ರೆಕಾರ್ಡಿಂಗ್​ ಮಾಡಲಾಗಿದೆ. ಒಮ್ಮಲೆ ನೂರಾರು ವಾದ್ಯಗಳ ಬಳಕೆ ಮಾಡಿ ಸಂಗೀತ ಸಿದ್ದಪಡಿಸಲಾಗಿದೆ. ಸ್ಯಾಂಡಲ್​ವುಡ್​ ಸಿನಿಮಾ ತಂಡ ಸಾಗರೋತ್ತರ ಪ್ರದೇಶಕ್ಕೆ ತೆರಳಿ 'ಸಂಗೀತ' ಸಿದ್ದಪಡಿಸಿಕೊಂಡು ಬಂದಿದೆ ಎಂದರೆ ಈ ಚಿತ್ರ ಹೇಗೆ ಮೂಡಿ ಬರಬಹುದು ಎಂಬುದನ್ನು ನೀವೇ ಊಹಿಸಿ.

ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಬಿ ಅಜನೀಶ್​​ ಲೋಕನಾಥ್​ ಅವರು ಶೇರ್​ ಮಾಡಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ರಿಯಲ್​ ಸ್ಟಾರ್​ ಉಪೇಂದ್ರ ಜೊತೆ ಸಂಗೀತ ನಿರ್ದೇಶಕರು ಉತ್ತಮ ಸಮಯ ಕಳೆದಿರೋದನ್ನು ಇಲ್ಲಿ ಕಾಣಬಹುದು. ಬುಡಾಪೆಸ್ಟ್​​ನ ಬೀದಿಗಳಲ್ಲಿ ಹೆಜ್ಜೆ ಹಾಕಿ ಗುಣಮಟ್ಟದ ಸಮಯ ಕಳೆದಿದ್ದಾರೆ. ಜೊತೆಗೆ, ಸ್ಟುಡಿಯೋದಲ್ಲಿ ಸಂಗೀತಕ್ಕೆ ಹಾಕಿರುವ ಶ್ರಮ ಇಲ್ಲಿ ಸ್ಪಷ್ಟವಾಗಿ ತೋರಿದೆ. ನೂರಾರು ಮ್ಯೂಜಿಶಿಯನ್​ಗಳು, ಸಂಗೀತ ವಾದ್ಯಗಳ ಜೊತೆ ಯು ಐ ಚಿತ್ರತಂಡ ಕೆಲಸ ಮಾಡಿರೋದನ್ನು ಇಲ್ಲಿ ಕಾಣಬಹುದಾಗಿದೆ. ಚಿತ್ರತಂಡದ ಶ್ರಮಕ್ಕೆ ಪ್ರೇಕ್ಷಕರು ಎಷ್ಟರ ಮಟ್ಟಿಗೆ ಮಣೆ ಹಾಕುತ್ತಾರೆಂಬುದನ್ನು ಅಕ್ಟೋಬರ್​​​ವರೆಗೆ ಕಾದು ನೋಡಬೇಕಿದೆ.

ಶೀರ್ಷಿಕೆ, ಪೋಸ್ಟರ್ಸ್, ಟೀಸರ್​​​, ಟ್ರೋಲ್​ ಸಾಂಗ್ಸ್​​​​ ಮೂಲಕ ಸಿನಿಪ್ರಿಯರ ಕುತೂಹಲ ಹೆಚ್ಚಿಸಿರುವ ಯು ಐ ಚಿತ್ರತಂಡ ಇತ್ತೀಚೆಗಷ್ಟೇ 'ಸೌಂಡ್​ ಆಫ್​ ಯುಐ' ಶೀರ್ಷಿಕೆಯಡಿ ವಿಡಿಯೋ ಅನಾವರಣಗೊಳಿಸಿತ್ತು. ಸಾಹಿತ್ಯವಿರದ ಮ್ಯೂಸಿಕ್​​ ಕೇಳುಗರಿಗೆ ಸಖತ್​ ಮಜಾ ಕೊಟ್ಟಿತ್ತು. ಇದೀಗ ವಿದೇಶದ ಕ್ಷಣಗಳನ್ನೊಳಗೊಂಡ ಚಿತ್ರತಂಡದ ವಿಡಿಯೋ ಮತ್ತಷ್ಟು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ:ನಿರ್ದೇಶಕ ರಂಜಿತ್​ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು; ಒತ್ತಡದಿಂದ ಹೇಳಿಕೆ ಹಿಂಪಡೆದ ವ್ಯಕ್ತಿ - complaint against Director Ranjith

'ಯು ಐ', ಕನ್ನಡದ ಖ್ಯಾತ ನಟ ಉಪೇಂದ್ರ ಅವರ ವೃತ್ತಿಜೀವನದಲ್ಲೇ ಒಂದು ವಿಶೇಷ ಮತ್ತು ವಿಭಿನ್ನ ಸಿನಿಮಾ ಎನ್ನಬಹುದು. 7 ವರ್ಷಗಳ ಬಳಿಕ ಉಪೇಂದ್ರ ಅವರು ಡೈರೆಕ್ಟರ್​​ ಕ್ಯಾಪ್​ ತೊಟ್ಟಿದ್ದಾರೆ. ನಟನೆ ಜೊತೆಗೆ ನಿರ್ದೇಶಕನ ಜವಾಬ್ದಾರಿಯನ್ನೂ ಹೊತ್ತಿದ್ದು, ಸಿನಿಮಾ ವಿಭಿನ್ನವಾಗಿ ಮೂಡಿ ಬರಲಿದೆ ಎಂಬ ವಿಶ್ವಾಸ ಅಭಿಮಾನಿಗಳಲ್ಲಿದೆ. ತಮ್ಮ ಈ ಬಹುನಿರೀಕ್ಷಿತ ಸಿನಿಮಾಗಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ನಿರ್ಮಾಪಕ ಕೆ.ಪಿ ಶ್ರೀಕಾಂತ್, ನವೀನ್​ ಮನೋಹರ್​​​ ಜೊತೆಗೂಡಿ ಹಗಲಿರುಳು ದುಡಿಯುತ್ತಿದ್ದಾರೆ.

ಇದನ್ನೂ ಓದಿ:ಹಂಗೇರಿಯಲ್ಲಿ ಉಪೇಂದ್ರ ಸಿನಿಮಾದ ಸಂಗೀತ ಸಂಯೋಜನೆ: ಸಖತ್​ ಥ್ರಿಲ್ಲಿಂಗ್​ ಆಗಿದೆ 'ಸೌಂಡ್​ ಆಫ್​ ಯಐ' - Sound of UI

ಸರಿ ಸುಮಾರು 100 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಅಕ್ಟೋಬರ್​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ನಿರ್ದಿಷ್ಟ ದಿನಾಂಕ ಇನ್ನಷ್ಟೇ ಬಹಿರಂಗವಾಗಬೇಕಿದ್ದು, ಅಭಿಮಾನಿಗಳು ಕಾತರರಾಗಿದ್ದಾರೆ.

ABOUT THE AUTHOR

...view details