ಕೋಲ್ಕತ್ತಾ (ಪಶ್ಚಿಮ ಬಂಗಾಳ): ಲೋಕಸಭಾ ಚುನಾವಣೆ 2024ರ ಕೊನೆಯ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬಾಲಿವುಡ್ನ ಡಿಸ್ಕೋ ಡ್ಯಾನ್ಸರ್ ಸ್ಟಾರ್ ಮಿಥುನ್ ಚಕ್ರವರ್ತಿ ಇಂದು ತಮ್ಮ ಮತ ಚಲಾಯಿಸಿದ್ದಾರೆ.
ಸಾಮಾನ್ಯರಂತೆ ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗುವ ಮೊದಲೇ ನಟ ಮಿಥುನ್ ಚಕ್ರವರ್ತಿ ತಮ್ಮ ಮತಗಟ್ಟೆಗೆ ಆಗಮಿಸಿದರು. ಕೋಲ್ಕತ್ತಾದ ಬೆಲ್ಗಾಚಿಯಾದಲ್ಲಿನ ಮತಗಟ್ಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸಿದರು. ಬಳಿಕ ನಾನು 'ನಾನು ಬಿಜೆಪಿ ಕಾರ್ಯಕರ್ತ, ನಾಯಕನಲ್ಲ' ಎಂದು ಹೇಳಿಕೊಂಡಿದ್ದಾರೆ.
ಫೆಬ್ರವರಿಯಲ್ಲಿ 73ರ ಹರೆಯದ ಬಾಲಿವುಡ್ ನಟ ಮೆದುಳಿನ ಸ್ಟ್ರೋಕ್ಗೆ (Ischemic Cerebrovascular Accident) ಒಳಗಾಗಿ ಕೋಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ, ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗಾಗಿ ವ್ಯಾಪಕ ಪ್ರಚಾರ ಮಾಡಿ ಗಮನ ಸೆಳೆದಿದ್ದರು.
ಮತ ಚಲಾಯಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟ, "ನಾನು ಬಿಜೆಪಿ ಕಾರ್ಯಕರ್ತ, ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ನನ್ನ ಕುಟುಂಬವನ್ನು ಸಹ ನಾನು ನೋಡಿಕೊಳ್ಳಬೇಕಿರುವುದರಿಂದ ನಾಳೆಯಿಂದ ಸಿನಿಮಾಗಳ ಬಗ್ಗೆ ಮಾತನಾಡುತ್ತೇನೆ" ಎಂದರು.
ಪಶ್ಚಿಮ ಬಂಗಾಳದ ಒಂಭತ್ತು ಲೋಕಸಭಾ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ಬರಾಸತ್, ಬಸಿರ್ಹತ್, ಡೈಮಂಡ್ ಹಾರ್ಬರ್, ದಮ್ ದಮ್, ಜಯನಗರ, ಜಾದವ್‌ಪುರ, ದಕ್ಷಿಣ ಕೋಲ್ಕತ್ತಾ, ಉತ್ತರ ಕೋಲ್ಕತ್ತಾ, ಮತ್ತು ಮಥುರಾಪುರದಲ್ಲಿ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಇದನ್ನೂ ಓದಿ:ಲಂಡನ್ನಲ್ಲಿ ಭಾರತೀಯ ನಟನನ್ನು ಕಂಡು ಭಾವುಕಳಾದ ಅಭಿಮಾನಿ: ಬಿಗಿದಪ್ಪಿ ಸಂತೈಸಿದ ಕಾರ್ತಿಕ್ ಆರ್ಯನ್ - Kartik Aaryan Fan
ಭಾರತೀಯ ಚಿತ್ರರಂಗದ ಶ್ರೇಷ್ಠ ನಟರಲ್ಲಿ ಒಬ್ಬರು ಎಂದು ಜನಪ್ರಿಯರಾಗಿರುವ ಮಿಥುನ್ ಚಕ್ರವರ್ತಿ 1976ರಲ್ಲಿ ಮೃಗಯಾ ಎಂಬ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದರು. 1982ರಲ್ಲಿ 'ಡಿಸ್ಕೋ ಡ್ಯಾನ್ಸರ್' ಮೂಲಕ ಸ್ಟಾರ್‌ಡಮ್ ಗಳಿಸಿದರು. ನಂತರ 'ಅಗ್ನಿಪಥ್', 'ತಕ್ದೀರ್', 'ಬಾತ್ ಬನ್ ಜಾಯೆ', 'ಗುನಾಹೋ ಕಾ ದೇವತಾ', 'ಶತ್ರಂಜ್', 'ಸೌತೆಲಾ', 'ಬಿಲ್ಲಾ ನಂ. 786' ಸೆರಿದಂತೆ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡರು. ಬಿಗ್ ಸ್ಕ್ರೀನ್ನಲ್ಲಿ ಕೊನೆಯದಾಗಿ ವಿವೇಕ್ ಅಗ್ನಿಹೋತ್ರಿ ಅವರ 'ದಿ ಕಾಶ್ಮೀರ್ ಫೈಲ್ಸ್'ನಲ್ಲಿ ಕಾಣಿಸಿಕೊಂಡರು. ಈ ಚಿತ್ರ 1990ರಲ್ಲಿ ಕಾಶ್ಮೀರದಿಂದ ಕಾಶ್ಮೀರಿ ಹಿಂದೂಗಳ ವಲಸೆಯ ಸುತ್ತ ಕೇಂದ್ರೀಕೃತವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ, ಪದ್ಮಭೂಷಣ ಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಭಾರತೀಯ ಜನತಾ ಪಕ್ಷ (ಬಿಜೆಪಿ)ಕ್ಕೆ ಸೇರ್ಪಡೆಯಾದರು.
ಇದನ್ನೂ ಓದಿ:ಮತ ಎಣಿಕೆಗೆ ಸಕಲ ಸಿದ್ಧತೆ: ಮಾಹಿತಿ ಹಂಚಿಕೊಂಡ ರಾಯಚೂರು ಚುನಾವಣಾಧಿಕಾರಿ - Preparation for Election Counting
2024ರ ಲೋಕಸಭಾ ಚುನಾವಣೆಯ ಆರು ಹಂತದ ಚುನಾವಣೆ ಮುಕ್ತಾಯವಾಗಿದ್ದು, ಇಂದು ನಡೆಯುತ್ತಿರುವುದು ಕೊನೆಯ ಹಂತದ ಮತದಾನ. ಬೆಳಗ್ಗೆ 7ರಿಂದ ಮತ ಚಲಾವಣೆ ಆರಂಭವಾಗಿದ್ದು, ಸಂಜೆ 6ರ ವರೆಗೆ ನಡೆಯಲಿದೆ. ಒಟ್ಟು 57 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ಜರುಗುತ್ತಿದೆ. ಪಶ್ಚಿಮ ಬಂಗಾಳದ 9 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅನುರಾಗ್ ಠಾಕೂರ್ ಸೇರಿದಂತೆ 904 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.