ಕನ್ನಡತಿ ಸೀರಿಯಲ್ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟ ಕಿರಣ್ ರಾಜ್. ಸದ್ಯ ಕಿರುತೆರೆಗೆ ಸ್ವಲ್ಪ ಬ್ರೇಕ್ ಕೊಟ್ಟು ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಕಿರಣ್ ರಾಜ್ ಮತ್ತೊಂದು ಸಿನಿಮಾ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಆ ಚಿತ್ರಕ್ಕೆ 'ಮೇಘ' ಎಂದು ಟೈಟಲ್ ಇಡಲಾಗಿದೆ. ಚರಣ್ ನಿರ್ದೇಶನದ 'ಮೇಘ' ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ಖ್ಯಾತ ಗೀತರಚನೆಕಾರ ಡಾ.ವಿ.ನಾಗೇಂದ್ರ ಪ್ರಸಾದ್ 'ಮೇಘ' ಚಿತ್ರದ ಟೀಸರ್ ಬಿಡುಗಡೆ ಮಾಡಿ ಇಡೀ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದ್ದಾರೆ.
ಬಳಿಕ ಮಾತನಾಡಿದ ನಿರ್ದೇಶಕ ಚರಣ್ ರಾಜ್, "ನಾನು ಮೂಲತಃ ಐಟಿ ಉದ್ಯೋಗಿ. ಕೋವಿಡ್ ನಂತರ ಐಟಿ ಕೆಲಸ ಬಿಟ್ಟು ಡಾ.ವಿ.ನಾಗೇಂದ್ರ ಪ್ರಸಾದ್ ಅವರ ಬಳಿ ಸಿನಿಮಾ ಕೆಲಸ ಕಲಿಯಲು ಆರಂಭಿಸಿದೆ. ಇನ್ನು 'ಮೇಘ' ನನ್ನ ಮೊದಲ ನಿರ್ದೇಶನದ ಚಿತ್ರ. ಮೇಘಗಳು ಆಕಾಶದಲ್ಲಿ ಯಾವಾಗಲೂ ಜೊತೆಯಾಗಿ ಚಲಿಸುತ್ತವೆ. ಆದರೆ, ಮಳೆಯನ್ನು ಎಲ್ಲೋ ಸುರಿಸುತ್ತವೆ. ಇದನ್ನೇ ಇಟ್ಟುಕೊಂಡು ಪ್ರೇಮ ಕಥೆ ಸಿದ್ಧಮಾಡಿಕೊಂಡೆ. ನಮ್ಮ ಸಿನಿಮಾದಲ್ಲಿ 'ಮೇಘ' ಎಂದರೆ ಪ್ರೀತಿ ಅಂತ. ಕಿರಣ್ ರಾಜ್ ಹಾಗೂ ಕಾಜಲ್ ಕುಂದರ್ ನಾಯಕ - ನಾಯಕಿಯಾಗಿ ನಟಿಸಿದ್ದಾರೆ. ರಾಜೇಶ್ ನಟರಂಗ ಸೇರಿದಂತೆ ಅನೇಕ ಹಿರಿಯ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರೀತಿ, ಸ್ನೇಹ, ಸೆಂಟಿಮೆಂಟ್ ಎಲ್ಲ ಅಂಶಗಳು ಈ ಚಿತ್ರದಲ್ಲಿವೆ. ಜೋಯಲ್ ಸಕ್ಕರಿ ಸಂಗೀತ ಸಂಯೋಜಿಸಿರುವ ಐದು ಸುಮಧುರ ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳನ್ನು ಗುರುಗಳಾದ ನಾಗೇಂದ್ರ ಪ್ರಸಾದ್ ಅವರು ಹಾಗೂ ಉಳಿದ ಮೂರು ಹಾಡುಗಳನ್ನು ನಾನು ಬರೆದಿದ್ದೇನೆ" ಅಂದರು.
ನಂತರ ನಟ ಕಿರಣ್ ರಾಜ್ ಮಾತನಾಡಿ, "ನಾನು ಈವರೆಗೂ ಮಾಡಿರದ ಪಾತ್ರದಲ್ಲಿ 'ಮೇಘ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಪ್ರೇಮ ಕಥಾನಕವಾಗಿದ್ದರೂ ಚಿತ್ರದ ಎಮೋಷನ್ ಎಲ್ಲರ ಗಮನ ಸೆಳೆಯುತ್ತದೆ. ಉದಾಹರಣೆಗೆ ನಾನು ಈ ಚಿತ್ರದ ಕಥೆ ಕೇಳಿ, ನನ್ನ ಅಪ್ಪನಿಗೆ ಬುಲೆಟ್ ಕೊಡಿಸಿದ್ದೇನೆ. ಈಗಿನ ಪೀಳಿಗೆಗೆ ಬೇಕಾದ ಎಲ್ಲ ಅಂಶಗಳು ನಮ್ಮ ಚಿತ್ರದಲ್ಲಿದೆ" ಎಂದರು.