ಹೊಸ ವರ್ಷಾರಂಭದಲ್ಲೇ ತೆರೆಗಪ್ಪಳಿಸಲು ಸಜ್ಜಾಗಿರುವ ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಚಿತ್ರ 'ಸಂಜು ವೆಡ್ಸ್ ಗೀತಾ-2'. ಚಂದನವನದ ಬಹುಬೇಡಿಕೆ ಕಲಾವಿದರಾದ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಿನಿಮಾ ಜನವರಿ 10ರಂದು ಪ್ರಪಂಚದಾದ್ಯಂತ ತೆರೆಕಾಣಲಿದೆ. ಬಿಡುಗಡೆ ಹೊಸ್ತಿಲಿನಲ್ಲಿರುವ ಸಿನಿಮಾ ಪ್ರಚಾರ ಪ್ರಾರಂಭಿಸಿದ್ದು, ಸುಮಧುರ ಹಾಡು ಅನಾವರಣಗೊಂಡಿದೆ.
ಶಿಡ್ಲಘಟ್ಟದ ರೇಶ್ಮೆ ಬೆಳೆಗಾರರ ವಿಷಯವನ್ನಿಟ್ಟುಕೊಂಡು, ನವಿರಾದ ಪ್ರೇಮಕಥೆಯನ್ನು ನಿರ್ದೇಶಕ ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ಆನಂದ್ ಆಡಿಯೋ ಮೂಲಕ ಅನಾವರಣಗೊಂಡಿರುವ ಹಾಡುಗಳು ಕೇಳುಗರ ಮನ ಗೆದ್ದಿವೆ. ಇದೀಗ ಚಿತ್ರದ ವಿಡಿಯೋ ಸಾಂಗನ್ನು ಕಿಚ್ಚ ಸುದೀಪ್ ಬಿಡುಗಡೆಗೊಳಿಸಿದ್ದಾರೆ. ಮಳೆಯಂತೇ ಬಾ.. ಶೀರ್ಷಿಕೆಯ ಹಾಡಿನ ಲಿರಿಕಲ್ ಮತ್ತು ಮೇಕಿಂಗ್ ಈಗಾಗಲೇ ರಿಲೀಸ್ ಆಗಿತ್ತು.
ಅಭಿನಯ ಚಕ್ರವರ್ತಿ ಸುದೀಪ್ ಮಾತನಾಡಿ, ''ಕಿಟ್ಟಿ ಹಾಗೂ ನಾಗಶೇಖರ್ ಸೇರಿ ಈ ಸಿನಿಮಾ ಮಾಡಿದ್ದಾರೆ. ಈ ಹಿಂದಿನ ಸಂಜು ವೆಡ್ಸ್ ಗೀತಾ ಯಶಸ್ವಿಯಾಗಿತ್ತು. ಕವಿರಾಜ್ ಬರೆದ ಮಳೆಯಂತೇ.. ಹಾಡು ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಹಾಡನ್ನು ಅನಾವರಣಗೊಳಿಸಲು ಬಹಳ ಖುಷಿಯಾಗ್ತಿದೆ'' ಎಂದು ಹೇಳುತ್ತಾ ತಂಡಕ್ಕೆ ಶುಭ ಹಾರೈಸಿದರು. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಆಯೋಜಿಸಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ನಿರ್ದೇಶಕ ನಾಗಶೇಖರ್, ಶ್ರೀನಗರ ಕಿಟ್ಟಿ, ಸಂಗೀತ ನಿರ್ದೇಶಕ ಶ್ರೀಧರ್ ವಿ.ಸಂಭ್ರಮ್, ನಿರ್ಮಾಪಕ ಛಲವಾದಿ ಕುಮಾರ್ ಉಪಸ್ಥಿತರಿದ್ದರು.
'ಕಥೆಯ ಕ್ರೆಡಿಟ್ ಸುದೀಪ್ ಅವರಿಗೇನೆ ಸಲ್ಲುತ್ತದೆ': ಮಾತು ಆರಂಭಿಸಿದ ನಿರ್ದೇಶಕ ನಾಗಶೇಖರ್, ರೇಶ್ಮೆ ಬೆಳೆಗಾರರ ಕುರಿತ ವಿಚಾರ ಇಟ್ಟುಕೊಂಡು ಈ ಚಿತ್ರ ಮಾಡಿದ್ದೇನೆ. ಅದರ ಜತೆಗೊಂದು ಲವ್ ಸ್ಟೋರಿಯೂ ಸಾಗುತ್ತದೆ. ಚಿತ್ರದ ಎಳೆಯನ್ನು ಕಿಚ್ಚ ಸುದೀಪ್ ಅವರು ಮಾಣಿಕ್ಯ ಶೂಟಿಂಗ್ ಟೈಂನಲ್ಲಿ ನನಗೆ ಕೊಟ್ಟಿದ್ದರು. ಇಂಥ ಕಥೆಗಳನ್ನು ನೀವು ಚೆನ್ನಾಗಿ ಹ್ಯಾಂಡಲ್ ಮಾಡುತ್ತೀರೆಂದು ಹೇಳಿ ನನಗೊಪ್ಪಿಸಿದ್ದರು. ಸಂಜು ವೆಡ್ಸ್ ಗೀತಾ-2 ಕಥೆಯ ಕ್ರೆಡಿಟ್ ಸುದೀಪ್ ಅವರಿಗೇನೆ ಸಲ್ಲುತ್ತದೆ. ಇಂದು ನಮ್ಮ ಸಿನಿಮಾದ ಮೆಲೋಡಿ ಸಾಂಗ್ ಅನ್ನು ರಿಲೀಸ್ ಮಾಡಿಕೊಡುವ ಮೂಲಕ ನಮಗೆ ಮತ್ತೊಮ್ಮೆ ಹರಸಿದ್ದಾರೆ ಎಂದು ತಿಳಿಸಿದರು.
ಶಿಡ್ಲಘಟ್ಟದಲ್ಲಿ ಪ್ರಾರಂಭವಾಗುವ ಕಥೆ ಸ್ವಿಟ್ಜರ್‌ಲ್ಯಾಂಡ್‌ವರೆಗೂ ಹೋಗುತ್ತದೆ. ಚಿತ್ರದಲ್ಲಿ ರೇಶ್ಮೆ ಬೆಳೆಗಾರ ಸಂಜು ಆಗಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದು, ಗೀತಾ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಅತಿ ಹೆಚ್ಚು ರೇಶ್ಮೆ ಬೆಳೆಯುತ್ತಾರೆ. ಆದರೆ ಅದರ ಕ್ರೆಡಿಟ್ ಬೇರೊಂದು ಕಡೆ ಹೋಗುತ್ತಿದೆ. ಇದೇ ವಿಷಯವನ್ನು ತೆಗೆದುಕೊಂಡಿದ್ದೇನೆ. ಇದು ಬೇರೆಯದ್ದೇ ಪ್ಯಾಟ್ರನ್ ಸಿನಿಮಾ. ಸಿನಿಮಾಗೆ ಹಾಡುಗಳೇ ಇನ್ವಿಟೇಶನ್. ಈ ಹಿಂದೆ 2 ಹಾಡುಗಳನ್ನು ಅನಾವರಣಗೊಳಿಸಿದ್ದೆವು. ನಮ್ಮ ನಿರೀಕ್ಷೆಗೂ ಮೀರಿ ಜನ ಸ್ಪಂದಿಸಿದ್ದಾರೆ. ಈ ಸಾಂಗ್ ಅನ್ನು ಗಗನವೇ ಬಾಗಿ ಹಾಡಿದ್ದ ಶ್ರೇಯಾ ಘೋಷಾಲ್ ಅವರಿಂದ ಹಾಡಿಸಬೇಕೆಂದಿತ್ತು. ಆದ್ರೆ ಇತ್ತೀಚೆಗೆ ಅವರು ಕನ್ನಡದಲ್ಲಿ ಹಾಡಲ್ಲ ಎಂದು ಗೊತ್ತಾಗಿ ಅಚ್ಚ ಕನ್ನಡದ ಪ್ರತಿಭೆ ಸಂಗೀತಾ ರವೀಂದ್ರನಾಥ್ ಅವರಿಂದ ಹಾಡಿಸಿದೆವು.
ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಶೂಟಿಂಗ್:ಹಾಡು ಅದ್ಭುತವಾಗಿ ಮೂಡಿ ಬಂತು. ಅವರಿಂದಲೇ ಮತ್ತೆರಡು ಹಾಡುಗಳನ್ನು ಹಾಡಿಸಿದ್ದೇವೆ. ಜತೆಗೆ ನಂದಿತಾ ಅವರೂ ಕೂಡಾ ಹಾಡಿದ್ದಾರೆ. ಸ್ವಿಟ್ಜರ್‌ಲ್ಯಾಂಡ್‌ನಲ್ಲಿ 10 ಸುಂದರ ಲೊಕೇಶನ್‌ಗಳನ್ನು ಗುರುತಿಸಿ ಶೂಟ್ ಮಾಡಿದ್ದೇವೆ. ನಿರ್ಮಾಪಕರು ಯಾವುದಕ್ಕೂ ಬೇಡ ಎನ್ನದೇ, ಒಂದೊಳ್ಳೆ ಚಿತ್ರವನ್ನು ಕನ್ನಡಿಗರಿಗೆ ನೀಡಬೇಕೆಂಬ ಉದ್ದೇಶದಿಂದ ಬಹಳ ಪ್ರೀತಿಯಿಂದ ಖರ್ಚು ಮಾಡಿದ್ದಾರೆ. ಅವರ ಬರ್ತ್ಡೇ, ಅವರಿಗೆ ಈ ಹಾಡನ್ನು ಡೆಡಿಕೇಟ್ ಮಾಡುತ್ತಿದ್ದೇವೆ ಎಂದು ತಿಳಿಸಿದರು.