ಪುಣೆ(ಮಹಾರಾಷ್ಟ್ರ): ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲಿನ ಚಾಕು ಇರಿತ ಕುರಿತು ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಹೇಳಿಕೆಗಳನ್ನು ನೀಡಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಿಜೆಪಿ ನಾಯಕ ಈ ದಾಳಿ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ನಟನ ಮೇಲಿನ ದಾಳಿ ನಿಜವೇ ಅಥವಾ ಖಾನ್ ನಟಿಸಿದ್ರೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಪುಣೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಸೈಫ್ ಮೇಲಿನ ದಾಳಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. "ಅವರಿಗೆ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ನನಗೆ ಅನುಮಾನವಿತ್ತು" ಎಂದು ತಿಳಿಸಿದ್ದಾರೆ.
"ಮುಂಬೈನಲ್ಲಿ ಬಾಂಗ್ಲಾದೇಶಿಗಳು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಿ. ಅವರು ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ್ರು. ಮೊದಲು ಅವರು ರಸ್ತೆಗಳ ಕ್ರಾಸ್ ಬಳಿ ನಿಲ್ಲುತ್ತಿದ್ದರು, ಈಗ ಮನೆಗಳಿಗೆ ಪ್ರವೇಶಿಸಲು ಪ್ರಾರಂಭಿಸಿದ್ದಾರೆ. ಬಹುಶಃ ಅವನು ಸೈಫ್ ಅವರನ್ನು ಕರೆದೊಯ್ಯಲು ಬಂದಿದ್ದರೇನೂ. ಒಳ್ಳೆಯದೇ, ಕಸವನ್ನು ತೆಗೆದುಕೊಂಡು ಹೋಗಬೇಕು. ನಟ ಆಸ್ಪತ್ರೆಯಿಂದ ಹೊರಬಂದಾಗ ನಾನು ಅವರನ್ನು ನೋಡಿದೆ. ಆಗ ಅವರಿಗೆ ನಿಜವಾಗಿಯೂ ಚಾಕುವಿನಿಂದ ಇರಿತವಾಗಿದೆಯೇ ಅಥವಾ ಅವರು ನಟಿಸುತ್ತಿದ್ದಾರೆಯೇ ಎಂದು ಅನುಮಾನವಾಯಿತು. ಅವರು ನಡೆಯುತ್ತಿದ್ದಾಗ ಡ್ಯಾನ್ಸ್ ಮಾಡುತ್ತಿದ್ದರು" ಎಂದು ರಾಣೆ ಹೇಳಿಕೆ ನೀಡಿದ್ದಾರೆ.
ಅಷ್ಟೇ ಅಲ್ಲದೇ, ನಿತೇಷ್ ರಾಣೆ ಎನ್‌ಸಿಪಿ (ಎಸ್‌ಪಿ) ನಾಯಕರಾದ ಸುಪ್ರಿಯಾ ಸುಳೆ ಮತ್ತು ಜಿತೇಂದ್ರ ಅವ್ಹಾದ್ ಅವರನ್ನು ಗುರಿಯಾಗಿಸಿಕೊಂಡು ಮಾತನಾಡಿದರು. ಈ ನಾಯಕರು ಸೈಫ್ ಅಲಿ ಖಾನ್, ಶಾರುಖ್ ಖಾನ್ ಅವರ ಮಗ ಮತ್ತು ನವಾಬ್ ಮಲಿಕ್ ಬಗ್ಗೆ ಮಾತ್ರ ಚಿಂತಿತರಾಗಿದ್ದಾರೆ. ಹಿಂದೂ ನಟನಿಗೆ ಹಿಂಸೆಯಾದಾಗ ಮುಂದೆ ಬರೋದಿಲ್ಲ ಎಂದು ತಿಳಿಸಿದರು.