ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳ ಆಗಮನ ಮುಂದುವರಿದಿದೆ. ಕಂಟೆಂಟ್ ಆಧಾರಿತ ಸಿನಿಮಾಗಳೊಂದಿಗೆ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಗಮನ ಸೆಳೆಯುತ್ತಿದ್ದಾರೆ. ಕೆಲವರಿಗೆ ಈ ಸಿನಿರಂಗ ಕೈ ಹಿಡಿದರೆ, ಒಂದಿಷ್ಟು ಮಂದಿ ಒಂದೆರಡು ಚಿತ್ರಗಳನ್ನು ಮಾಡಿ ಸುಮ್ಮನಾಗುತ್ತಾರೆ. ಇದೀಗ 'ಮಾರಿಗೆ ದಾರಿ' ಎಂಬ ಚಿತ್ರತಂಡ ಸದ್ದಿಲ್ಲದೇ ಚಿತ್ರೀಕರಣ ಮುಗಿಸಿಕೊಂಡು, ಬಿಡುಗಡೆಗೆ ಎದುರು ನೋಡುತ್ತಿದೆ.
ಬಿಡುಗಡೆಗೆ ಸಜ್ಜಾಗುತ್ತಿರುವ 'ಮಾರಿಗೆ ದಾರಿ' ತನ್ನ ಫಸ್ಟ್ ಲುಕ್ ಟೀಸರ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಹೊಸತೇನನ್ನೋ ಹೇಳಲು ಹೊರಟಿರುವಂತೆ ಭಾಸವಾಗುವ ಈ ಟೀಸರ್ಲ್ಲಿ ಕಥೆಯ ಸುಳಿವನ್ನು ಬಿಟ್ಟು ಕೊಡದೇ, ಹೀರೋ ಕ್ಯಾರೆಕ್ಟರ್ನ ಒಂದಷ್ಟು ಚಹರೆಗಳನ್ನು ಪ್ರೇಕ್ಷಕರ ಮುಂದಿಡಲಾಗಿದೆ. ಸದ್ಯ ಫಸ್ಟ್ ಲುಕ್ ಟೀಸರ್ ಮೂಲಕ ಗಮನ ಸೆಳೆಯುತ್ತಿರುವ 'ಮಾರಿಗೆ ದಾರಿ' ಪಕ್ಕಾ ಮಾಸ್ ಕಂಟೆಂಟ್ ಹೊಂದಿರುವ ಚಿತ್ರವೆಂಬುದನ್ನು ಸಾರಿ ಹೇಳುವಂತಿದೆ.
ಕಥೆ, ಚಿತ್ರಕಥೆ, ಸಂಭಾಷಣೆಯೊಂದಿಗೆ ಈ ಚಿತ್ರವನ್ನು ಅಗಸ್ತ್ಯ ಎಂಬ ಯುವ ಪ್ರತಿಭೆ ನಿರ್ದೇಶನ ಮಾಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ನಾಯಕನಾಗಿಯೂ ಅವರೇ ನಟಿಸಿದ್ದಾರೆ. ಅವರ ಒಂದಷ್ಟು ಲುಕ್ಗಳ ಝಲಕ್ಗಳು ಫಸ್ಟ್ ಲುಕ್ ಟೀಸರ್ ಮೂಲಕ ಬಹಿರಂಗಪಡಿಸಲಾಗಿದೆ. ನೆಲಮೂಲದ ಕಥೆ, ಮಾಸ್ ದೃಶ್ಯಾವಳಿಗಳ ಸುಳಿವಿನೊಂದಿಗೆ ಮೂಡಿ ಬಂದಿರುವ ಈ ಚಿತ್ರದ ಟೀಸರ್ ಒಂದಷ್ಟು ಆಲೋಚೆನೆಗಳಿಗೆ ನಿಮ್ಮನ್ನು ತಳ್ಳುತ್ತದೆ. ಈ ಮೂಲಕ ಹೊಸಬರೇ ಸೇರಿಕೊಂಡು ಮಾಡಿರುವ 'ಮಾರಿಗೆ ದಾರಿ' ಚಿತ್ರ ಸಿನಿಮಾಪ್ರಿಯರಲ್ಲಿ ಕುತೂಹಲ ಹುಟ್ಟಿಸಿದೆ.