ಚೆನ್ನೈ(ತಮಿಳುನಾಡು):ದೇಶದ 21 ರಾಜ್ಯಗಳಲ್ಲಿ ಇಂದು ಮೊದಲ ಹಂತದ ಲೋಕಸಭೆ ಚುನಾವಣೆಗೆ ಮತದಾನ ನಡೆಯುತ್ತಿದೆ. ತಮಿಳುನಾಡಿನಲ್ಲೂ ಬಿರುಸಿನಿಂದ ಮತದಾನ ಸಾಗುತ್ತಿದೆ. ಖ್ಯಾತ ತಮಿಳು ನಟ ದಳಪತಿ ವಿಜಯ್ ಮತ ಹಕ್ಕು ಚಲಾಯಿಸಿ ಗಮನ ಸೆಳೆದರು.
ಎರಡು ತಿಂಗಳ ಹಿಂದೆ ರಾಜಕೀಯ ಪ್ರವೇಶಿಸಿರುವ ವಿಜಯ್, ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿದ್ದಾರೆ. ಇದೀಗ ವೆಂಕಟ್ ಪ್ರಭು ನಿರ್ದೇಶನದ ಗೋಟ್ (GOAT - The Greatest of All Times) ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಕೆಲಸಗಳ ನಡುವೆ ಮತ ಚಲಾಯಿಸಲೆಂದೇ ಇತ್ತೀಚೆಗೆ ರಷ್ಯಾದಿಂದ ಮರಳಿದ್ದರು. ಇಂದು ಚೆನ್ನೈನ ನೀಲಂಕಾರೈನಲ್ಲಿ ಮತಗಟ್ಟೆಯಲ್ಲಿ ವೋಟ್ ಮಾಡಿದರು.
ಮತದಾನಕ್ಕೆ ನೆಚ್ಚಿನ ನಟ ಬರುವ ವಿಷಯ ತಿಳಿದ ಅಭಿಮಾನಿಗಳು ಮತಗಟ್ಟೆ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಪೊಲೀಸ್ ಭದ್ರತೆಯಲ್ಲಿ ಮತಗಟ್ಟೆಯೊಳಗೆ ತೆರಳಿದ ವಿಜಯ್ ತಮ್ಮ ಹಕ್ಕು ಚಲಾಯಿಸಿದರು.
ತಮಿಳಗ ವೆಟ್ರಿ ಕಳಗಂನ ಮೂಲಕ ಪಾರದರ್ಶಕತೆ, ಸಮಾನತೆ ಮತ್ತು ಭ್ರಷ್ಟಾಚಾರವನ್ನು ಕೊನೆಗೊಳಿಸುವುದು ಸೇರಿದಂತೆ ರಾಜಕೀಯ ಕ್ಷೇತ್ರದಲ್ಲಿ ಸುಧಾರಣೆ ತರುವ ಗುರಿ ಹೊಂದಿರುವುದಾಗಿ ವಿಜಯ್ ಈಗಾಗಲೇ ಹೇಳಿದ್ದಾರೆ. ರಾಜಕೀಯ ಕೇವಲ ವೃತ್ತಿಯ ಆಯ್ಕೆಯಲ್ಲ, ಜನಸೇವೆಗೆ ತನ್ನ ದೃಢವಾದ ಬದ್ಧತೆ ಎಂದಿದ್ದಾರೆ.