ವಿಶ್ವವಿಖ್ಯಾತ 'ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ಕ್ಕೆ ದಿನಗಣನೆ ಆರಂಭವಾಗಿದೆ. ಇದೇ ತಿಂಗಳ 29 ರಿಂದ ಮಾರ್ಚ್ 7ರವರೆಗೆ ಈ ಚಿತ್ರೋತ್ಸವ ನಡೆಯಲಿದೆ. 15ನೇ ಬೆಂಗಳೂರು ಸಿನಿಮೋತ್ಸವದಲ್ಲಿ ಕನ್ನಡ ಸೇರಿದಂತೆ ವಿಶ್ವದ ಹಲವು ಭಾಷೆಗಳ ಸಿನಿಮಾ ಪ್ರದರ್ಶನಗೊಳ್ಳಲಿವೆ. ಜೊತೆಗೆ ಚಿತ್ರೋತ್ಸವದಲ್ಲಿ ಸ್ಪರ್ಧಾ ವಿಭಾಗವೂ ಇದೆ. ಮೂರು ವಿವಿಧ ಸ್ಪರ್ಧಾ ವಿಭಾಗದಲ್ಲಿ ಹಲವು ಕನ್ನಡ ಸಿನಿಮಾಗಳು ಬಹು ಭಾಷೆಯ ಸಿನಿಮಾಗಳೊಟ್ಟಿಗೆ ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ.
ಮೂರು ವಿಭಾಗಗಳಲ್ಲಿ ಸ್ಪರ್ಧೆ: ಕನ್ನಡ ಸ್ಪರ್ಧಾ ವಿಭಾಗ, ಭಾರತೀಯ ಸ್ಪರ್ಧಾ ವಿಭಾಗ ಹಾಗೂ ಏಷಿಯನ್ ಸ್ಪರ್ಧಾ ವಿಭಾಗ ಎಂಬ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಕನ್ನಡ ವಿಭಾಗದಲ್ಲಿ ಈ ಬಾರಿ 12 ಸಿನಿಮಾಗಳು ಕಣಕ್ಕಿಳಿಯುತ್ತಿವೆ. ಈ ಪೈಕಿ ಟಕ್ಕರ್ ಹಾಗೂ ರನ್ ಆಂಟೋನಿ ಖ್ಯಾತಿಯ ರಘು ಶಾಸ್ತ್ರೀ ನಿರ್ದೇಶನದ 'ಲೈನ್ ಮ್ಯಾನ್' ಸಿನಿಮಾ ಕೂಡ ಸ್ಪರ್ಧೆಗಿಳಿಯುತ್ತಿದೆ. ಈ ಚಿತ್ರ ಇನ್ನಷ್ಟೇ ತೆರೆಕಾಣಬೇಕಿದೆ.
ತ್ರಿಗುಣ್ ನಾಯಕ ನಟನಾಗಿ ನಟಿಸಿರುವ ಈ ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನದ ಜೊತೆಗೆ ಪ್ರಶಸ್ತಿಗಳ ಬೇಟೆಗಿಳಿದಿದೆ. ಭಿನ್ನ, ಡಿಯರ್ ಸತ್ಯ ಸಿನಿಮಾಗಳನ್ನು ನಿರ್ಮಿಸಿರುವ ಪರ್ಪಲ್ ರಾಕ್ ಸಂಸ್ಥೆಯಡಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ 'ಲೈನ್ ಮ್ಯಾನ್' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.