ಬಾಲಿವುಡ್ ಸಿನಿಮಾ 'ಲಾಪತಾ ಲೇಡಿಸ್' ಸ್ಕ್ರೀನಿಂಗ್ ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ನಡೆಯಿತು. ಮಿಸ್ಟರ್ ಪರ್ಫೆಕ್ಷನಿಸ್ಟ್ ಖ್ಯಾತಿಯ ಅಮೀರ್ ಖಾನ್ ಅವರು ನಿರ್ದೇಶಕಿ ಕಿರಣ್ ರಾವ್ ಜೊತೆ ಈ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. 'ಲಾಪತಾ ಲೇಡಿಸ್' ಜೊತೆ ಮುಂಬರುವ ಪ್ರಾಜೆಕ್ಟ್ ಬಗ್ಗೆಯೂ ಅಭಿಮಾನಿಗಳೊಂದಿಗೆ ನಟ ಮಾತನಾಡಿದರು.
ಅಮೀರ್ ಖಾನ್ ತಮ್ಮ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ 'ಸಿತಾರೆ ಝಮೀನ್ ಪರ್' ಬಗ್ಗೆಯೂ ಮಾಹಿತಿ ಹಂಚಿಕೊಂಡರು. ಇದು 'ತಾರೆ ಝಮೀನ್ ಪರ್'ನ ಮುಂದುವರೆದ ಭಾಗ. ಹೊಸ ಕಥಾಹಂದರ ಮತ್ತು ಪಾತ್ರಗಳಿದ್ದು ಭಿನ್ನವಾಗಿ ಮೂಡಿಬರಲಿದೆ. ಈ ಚಿತ್ರ ಕಣ್ಣೀರಿನ ಬದಲು ನಗು ಹೊಮ್ಮಿಸುತ್ತದೆ ಎಂದು ವಿವರಿಸಿದರು.
ಅಮೀರ್ ಖಾನ್ ಕೊನೆಯದಾಗಿ 'ಲಾಲ್ ಸಿಂಗ್ ಚಡ್ಡಾ'ದಲ್ಲಿ ನಟಿಸಿದ್ದರು. 2022ರಲ್ಲಿ ಬಿಡುಗಡೆಯಾದ ಈ ಸಿನಿಮಾ ನಿರೀಕ್ಷೆ ತಲುಪಲಿಲ್ಲ. ಅದಾದ ಬಳಿಕ ಸಿನಿಮಾಗಳಿಂದ ದೂರ ಉಳಿದು ಕುಟುಂಬಕ್ಕೆ ಸಮಯ ಮೀಸಲಿಟ್ಟರು. ಹೀಗಾಗಿ ಮುಂದಿನ ಸಿನಿಮಾ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ.
'ಲಾಪತಾ ಲೇಡಿಸ್' ಸ್ಕ್ರೀನಿಂಗ್ ನಂತರ ಮಾಧ್ಯಮಗಳೊಂದಿಗೆ ಮಾತನಾಡುವಾಗ, ಮುಂದಿನ ಪ್ರಾಜೆಕ್ಟ್ ಕುರಿತು ಕೆಲವು ಅಪ್ಡೇಟ್ಸ್ ಒದಗಿಸಿದರು. "ಸಿತಾರೆ ಝಮೀನ್ ಪರ್ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದೆ. ಈ ವರ್ಷದ ಕ್ರಿಸ್ಮಸ್‌ಗೆ ಬಿಡುಗಡೆಗೊಳಿಸುವ ಗುರಿ ಇದೆ" ಎಂದು ತಿಳಿಸಿದರು.