ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ದಂಡುಪಾಳ್ಯ ಖ್ಯಾತಿಯ ಶ್ರೀನಿವಾಸರಾಜು ನಿರ್ದೇಶನದ ಬಹು ನಿರೀಕ್ಷಿತ ಚಿತ್ರ 'ಕೃಷ್ಣಂ ಪ್ರಣಯ ಸಖಿ' ಶೀಘ್ರದಲ್ಲೇ ತೆರೆ ಕಾಣಲಿದೆ. ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಸಿನಿ ಪ್ರೇಮಿಗಳ ಮನಸ್ಸು ಕದ್ದಿವೆ. ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ ಇದಾಗಿರಲಿದ್ದು, ಇತ್ತೀಚೆಗೆ ನಡೆದ ಅದ್ಧೂರಿ ಕಾರ್ಯಕ್ರಮವೊಂದರಲ್ಲಿ ಚಿತ್ರತಂಡ ಬಿಡುಗಡೆ ದಿನಾಂಕ ಸೇರಿದಂತೆ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿವೆ.
ಕಾರ್ಯಕ್ರಮದ ಆರಂಭದಲ್ಲಿ ಮಾತು ಶುರು ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್, ದಂಡುಪಾಳ್ಯ ಚಿತ್ರದ ನಿರ್ದೇಶಕ ಶ್ರೀನಿವಾಸರಾಜು ಅವರು ಚಿತ್ರದ ಕಥೆ ಹೇಳಲು ಬರುತ್ತಿದ್ದಾರೆ ಎಂದಾಗ, ಅವರು ನನ್ನ ಜಾನರ್ ಬದಲಾಯಿಸುವ ಕಥೆ ಮಾಡಿರಬಹುದು ಅಂದುಕೊಂಡೆ. ಆದರೆ, ಆರಂಭದಲ್ಲೇ ಅವರು ಎಂಟು ನಾಯಕಿಯರು ಎಂದಾಗ, ಓ ಇದು ನನ್ನ ಜಾನರ್ ಚಿತ್ರವೇ ಅನ್ನಿಸಿತು. 'ಕೃಷ್ಣಂ ಪ್ರಣಯ ಸಖಿ' ಉತ್ತಮ ಕಥಾಹಂದರ ಹೊಂದಿರುವ ಚಿತ್ರ. ಕನ್ನಡ ಚಿತ್ರರಂಗದ ಹಿರಿಯ ನಟರೊಂದಿಗೆ ಈ ಚಿತ್ರದಲ್ಲಿ ನಟಿಸಿದ್ದು ಸಂತೋಷವಾಯಿತು. ನೋಡುಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಅಂತಹ ಉತ್ತಮ ಚಿತ್ರ ಮಾಡಿದ್ದಾರೆ ಶ್ರೀನಿವಾಸರಾಜು. ಪ್ರಶಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಈ ನನ್ನ ಈವರೆಗಿನ ವೃತ್ತಿ ಜೀವನದ ಬಿಗ್ ಬಜೆಟ್ ಚಿತ್ರ ಎಂದು ಹೇಳಿದರು.
ನಂತರ ನಿರ್ದೇಶಕ ಶ್ರೀನಿವಾಸರಾಜು ಮಾತನಾಡಿ, ಇದು ಗಣೇಶ್ ಅವರಿಗೆ ಸೂಕ್ತವಾದ ಕಥೆ. ಅವರ ಹಾಗೂ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಉತ್ತಮವಾಗಿ ಮೂಡಿಬಂದಿದೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಚೆನ್ನಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಆರು ಹಾಡುಗಳು ಈ ಚಿತ್ರದಲ್ಲಿದ್ದು, ಎರಡು ಹಾಡುಗಳು ಈಗಾಗಲೇ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿವೆ. ಇತ್ತೀಚಿಗೆ ಬಿಡುಗಡೆಯಾದ "ಚಿನ್ನಮ್ಮ" ಹಾಡಂತೂ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿದೆ. ಸಿನಿಮಾ ಕೂಡ ಪ್ರೇಕ್ಷಕರಿಗೆ ಇಷ್ಟ ಆಗುತ್ತೆ ಎಂಬ ವಿಶ್ವಾಸವಿದೆ ಎಂದು ಚಿತ್ರದ ಕೆಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡರು.