ಕಿರಿಕ್ ಪಾರ್ಟಿ ಚಿತ್ರದ ಬಳಿಕ ಕನ್ನಡ ಹಾಗೂ ವೆಬ್ ಸೀರಿಸ್ಗಳನ್ನು ಮಾಡುತ್ತಾ ತನ್ನದೇ ಬೇಡಿಕೆ ಹೊಂದಿರುವ ನಟಿ ಸಂಯುಕ್ತ ಹೆಗ್ಡೆ. ಸದ್ಯ 'ಕ್ರೀಂ' ಚಿತ್ರದಲ್ಲಿ ಪವರ್ಫುಲ್ ಪಾತ್ರ ನಿರ್ವಹಿಸಿದ್ದಾರೆ. ಖ್ಯಾತ ಲೇಖಕ ಅಗ್ನಿ ಶ್ರೀಧರ್ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
ಡಿ.ಕೆ.ದೇವೇಂದ್ರ ನಿರ್ಮಿಸಿರುವ ಕ್ರೀಂ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಬರೆದಿದ್ದಾರೆ. ಚಿತ್ರದ ಪ್ರಮುಖಪಾತ್ರದಲ್ಲೂ ಅಗ್ನಿ ಶ್ರೀಧರ್ ನಟಿಸಿದ್ದಾರೆ.
ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಟನೆಯಲ್ಲಿ ಆಸಕ್ತಿ ಇರಲಿಲ್ಲ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ನಿರ್ಮಾಪಕ ದೇವೇಂದ್ರ ನನ್ನನ್ನು ಈ ಪಾತ್ರ ನಿರ್ವಹಣೆ ಮಾಡಲು ಹೆಚ್ಚು ಒತ್ತಾಯಿಸಿದರು. ನಾನು ಆಗಲ್ಲ ಎಂದಿದ್ದೆ. ನಿರ್ಮಾಪಕರು ಹಾಗೂ ನನ್ನ ಹತ್ತಿರದವರ ಒತ್ತಾಯಕ್ಕೆ ನಟಿಸಲು ಒಪ್ಪಿಕೊಂಡೆ. ಈ ವಿಷಯವನ್ನು ಚಿತ್ರ ಬಿಡುಗಡೆಯಾಗುವವರೆಗೂ ಗೌಪ್ಯವಾಗಿಡೋಣ ಅಂತಾನೇ ಹೇಳಿದ್ದೆ. ಆದರೆ ನಿರ್ಮಾಪಕರು ಟ್ರೇಲರ್ನಲ್ಲೇ ನನ್ನನ್ನು ತೋರಿಸಿಬಿಟ್ಟಿದ್ದಾರೆ.
"ಕ್ರೀಂ" ಎಂದರೆ ಬೀಜಾಕ್ಷರ ಮಂತ್ರ. ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿಯ ಕುರಿತಾದ ಕಥಾಹಂದರವನ್ನು ಸಿನಿಮಾ ಹೊಂದಿದೆ. ಇಂದಿಗೂ ನಮ್ಮ ಊರು, ದೇಶ ಹಾಗೂ ವಿದೇಶಗಳಲ್ಲೂ ಈ ಕೃತ್ಯ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ. ಅಭಿಷೇಕ್ ಬಸಂತ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಸಂಯುಕ್ತ ಹೆಗಡೆ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ ಎಂದು ತಿಳಿಸಿದರು.
ನಿರ್ದೇಶಕ ಅಭಿಷೇಕ್ ಬಸಂತ್ ಮಾತನಾಡಿ, ನಾನು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ. ಹಾಗಾಗಿ ಎಲ್ಲಾ ಕಲಾವಿದರ ಸಹಕಾರದಿಂದ ಚಿತ್ರೀಕರಣ ನಿಗದಿಯಂತೆ ಮುಕ್ತಾಯವಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರಕ್ಕೆ ನನ್ನ ಮೊದಲ ನಿರ್ದೇಶನ ಇರಬೇಕೆಂಬ ಆಸೆಯಿತ್ತು. ಅಗ್ನಿ ಶ್ರೀಧರ್ ಅವರ ಈ ಕಥೆ ಬಹಳ ಇಷ್ಟವಾಯಿತು. ನನ್ನ ಚೊಚ್ಚಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದು ಕೇಳಿಕೊಂಡರು.
ಇದನ್ನೂ ಓದಿ:'ಜೈ ಶ್ರೀ ರಾಮ್' ಎನ್ನುತ್ತಾ ಗದೆ ಹಿಡಿದ ದರ್ಶನ್; ಕುತೂಹಲ ಕೆರಳಿಸಿತು ಹೊಸ ಸಿನಿಮಾದ ಗ್ಲಿಂಪ್ಸ್
ಅಭಿನಯದ ಜೊತೆಗೆ ಡ್ಯಾನ್ಸ್ ಮೂಲಕ ಗಮನ ಸೆಳೆಯುವ ಸಂಯುಕ್ತ ಹೆಗ್ಡೆ ಮಾತನಾಡಿ, ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ನಾನು ಈವರೆಗೂ ಮಾಡಿರದ ಪಾತ್ರವಿದು. ಆ್ಯಕ್ಷನ್ ಕೂಡ ಮಾಡಿದ್ದೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಬಜೆಟ್ನಲ್ಲಿ ಡಾಲಿ ಧನಂಜಯ್ ಸಿನಿಮಾ ಸಾಲುಗಳ ಸದ್ದು: ಲಿಡ್ಕರ್ ಬ್ಯಾಗ್ನಲ್ಲಿ ಬಂತು ಆಯವ್ಯಯದ ಪ್ರತಿ
ನಿರ್ಮಾಪಕ ದೇವೇಂದ್ರ ಮಾತನಾಡಿ, ನಮ್ಮ ಚಿತ್ರದಲ್ಲಿ ನಟಿಸಬೇಕಿದ್ದ ಖಳನಟರೊಬ್ಬರು ಕಾರಣಾಂತರದಿಂದ ನಟಿಸಲು ಆಗಲ್ಲ ಎಂದಾಗ ನಾನು ಹಾಗೂ ನಿರ್ದೇಶಕರು ಬಹಳ ಒತ್ತಡದಲ್ಲಿದ್ದೆವು. ಆಗ ನನಗೆ ಈ ಪಾತ್ರವನ್ನು ಅಗ್ನಿ ಶ್ರೀಧರ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅನಿಸಿತು. ಅವರ ಬಳಿ ನೀವೇ ಈ ಪಾತ್ರ ಮಾಡಬೇಕು ಎಂದು ಹೇಳಿದಾಗ ಅವರು ಒಪ್ಪಲಿಲ್ಲ. ನಂತರ ಬಹಳ ಕಷ್ಟಪಟ್ಟು ಅವರನ್ನು ಒಪ್ಪಿಸಿದೆವು. ಚಿತ್ರತಂಡದ ಸಹಕಾರದಿಂದ "ಕ್ರೀಂ" ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಸದ್ಯ ಟ್ರೇಲರ್ನಿಂದ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ ಕ್ರೀಂ ಸಿನಿಮಾ ಮಾರ್ಚ್ 1ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.