ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ಕೈಚಳಕದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಚಿತ್ರ 'ಮ್ಯಾಕ್ಸ್'. ಸದ್ಯ ಟೀಸರ್ನಿಂದಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಹುಟ್ಟುಹಾಕಿರುವ ಈ ಸಿನಿಮಾ ಕ್ರಿಸ್ಮಸ್ ದಿನದಂದು ರಿಲೀಸ್ ಆಗಲಿದೆ.
ಮ್ಯಾಕ್ಸ್ ಚಿತ್ರ ಸೆಟ್ಟೇರಾಗಿನಿಂದಲೂ ಕಿಚ್ಚ ಸುದೀಪ್, ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ಮಾಪಕರಾದ ಕಲೈಪುಲಿ ಸೇರಿದಂತೆ ಚಿತ್ರ ತಂಡವು ಎಲ್ಲಿಯೂ ಮಾತನಾಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಖಾಸಗಿ ಹೋಟೆಲ್ನಲ್ಲಿ ನಟ ಸುದೀಪ್, ನಿರ್ದೇಶಕ ವಿಜಯ್ ಕಾರ್ತಿಕೇಯ, ನಿರ್ಮಾಪಕ ಕಲೈಪುಲಿ, ಎಸ್.ಧಾನು, ಸುಧಾ ಬೆಳವಾಡಿ, ಕರಿಸುಬ್ಬು, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಲೇ, ವಿಜಯ್ ಚೆಂಡೂರು, ನಾಗರಾಜ್, ಅನಿರುದ್ದ್, ಪ್ರವೀಣ್, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಛಾಯಾಗ್ರಾಹಕ ಶೇಖರ್ ಚಂದ್ರ, ಸಾಹಸ ನಿರ್ದೇಶಕ ಚೇತನ್ ಡಿ’ಸೋಜ, ಕಲಾ ನಿರ್ದೇಶಕ ಶಿವಕುಮಾರ್, ಸಂಕಲನಕಾರ ಗಣೇಶ್ ಬಾಬು, ಕಾರ್ಯಕಾರಿ ನಿರ್ಮಾಪಕ ಶ್ರೀರಾಮ್ ಮ್ಯಾಕ್ಸ್ ಚಿತ್ರದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡರು.
ಚಿತ್ರದ ಬಗ್ಗೆ ಸುದೀಪ್ ಮಾತನಾಡಿ, ''ನಾನು ಈ ಸಿನಿಮಾ ಒಪ್ಪುವುದಕ್ಕೆ ಮೂಲ ಕಾರಣ ನಿರ್ದೇಶಕ ವಿಜಯ್ ಕಾರ್ತಿಕೇಯ. ಅವರು ಬಂದು ಹೇಳಿದ ಕಥೆ ಚೆನ್ನಾಗಿರಲಿಲ್ಲವೆಂದರೆ ಯಾವುದೂ ಇಲ್ಲಿಯವರೆಗೂ ಬರುತ್ತಿರಲಿಲ್ಲ. ಧಾನು ಅವರು ಹಿರಿಯ ನಿರ್ಮಾಪಕರು. ಅವರು ಕಳಿಸಿಕೊಟ್ಟರು. ಕಥೆ ಚೆನ್ನಾಗಿರಲಿಲ್ಲ ಎಂದರೆ, ಬೇರೆ ಕಥೆ ಹುಡುಕುತ್ತಿದ್ದೆವೇನೋ. ಆದರೆ, ವಿಜಯ್ ಹೇಳಿದ ಕಥೆ ಬಹಳ ಇಷ್ಟವಾಯಿತು. ಚೆನ್ನೈನಿಂದ ಬಂದ ಅವರನ್ನು ಇಲ್ಲೇ ಉಳಿಸಿಕೊಂಡು, ಅವರ ಜೊತೆಗೆ ಕೂತು ಸಾಕಷ್ಟು ಚರ್ಚೆ ಮಾಡಿ, ಈ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿ ರೂಪಿಸಲಾಯಿತು'' ಎಂದರು.
''2004ರಲ್ಲಿ ಚೆನ್ನೈನಲ್ಲಿ 'ನಲ್ಲ' ಚಿತ್ರಕ್ಕೆ ಚಿತ್ರೀಕರಣ ಮಾಡುತ್ತಿದ್ದೆ. 'ಕಾಕ್ಕಾ ಕಾಕ್ಕಾ' ಎಂಬ ಚಿತ್ರ ಬಹಳ ಚೆನ್ನಾಗಿ ಓಡುತ್ತಿತ್ತು. ಆ ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುವ ಯೋಚನೆಯಿಂದ ಧಾನು ಅವರನ್ನು ಭೇಟಿ ಮಾಡಲು ಪ್ರಯತ್ನಿಸಿದೆ. ಹೋಗಿ ಭೇಟಿಯಾದೆ. ಮೊದಲ ದಿನ ಬಹಳ ಟೆನ್ಶನ್‍ನಲ್ಲಿದ್ದರು. 'ಕಾಕ್ಕಾ ಕಾಕ್ಕಾ' ಚಿತ್ರದ ಹಕ್ಕುಗಳನ್ನು ಕೊಡುವುದಕ್ಕೆ ಸಾಧ್ಯವೇ? ಎಂದೆ. 'ಆಸೆಪಟ್ಟು ಬಂದಿದ್ದೀರಾ. ನನಗೇನು ಬೇಡ' ಎಂದು ತಕ್ಷಣವೇ ಉಚಿತವಾಗಿ ಹಕ್ಕುಗಳನ್ನು ಬರೆದುಕೊಟ್ಟರು. ಅಂತಹ ಸಹೃದಯಿ ಹಿರಿಯ ನಿರ್ಮಾಪಕರ ಜೊತೆಗೆ ಸಿನಿಮಾ ಮಾಡಿರುವುದು ಖುಷಿಯಾಗಿದೆ'' ಎಂದು ಸುದೀಪ್ ನೆನೆದರು.
ಅಮ್ಮ ಚಿತ್ರ ನೋಡಬೇಕು ಅಂದಿದ್ದರು:''ಮ್ಯಾಕ್ಸ್ ಚಿತ್ರವನ್ನು ನೋಡಬೇಕು ಎಂದು ನಮ್ಮ ತಾಯಿ ಹೇಳಿದ್ದರು. ಆದರೆ ಅವರ ಆಸೆ ಈಡೇರಲಿಲ್ಲ. ಅವರ ಆಶೀರ್ವಾದ ಚಿತ್ರದ ಮೇಲಿರುತ್ತದೆ. ಆಗಾಗ, ಅವರಿಗೆ ಕೆಲವು ತುಣುಕುಗಳನ್ನು ತೋರಿಸುತ್ತಿದ್ದೆ. ಚಿತ್ರತಂಡದ ಎಲ್ಲರೂ ನನ್ನನ್ನು ಹೊಗಳುತ್ತಿದ್ದಾರೆ. ಎಲ್ಲರಿಗೂ ಪ್ರಮುಖ ಪಾತ್ರಗಳಿವೆ. ಎಲ್ಲರೂ ಬಹಳ ಚೆನ್ನಾಗಿ ತಮ್ಮ ಕೆಲಸವನ್ನು ನಿರ್ವಹಿಸಿದ್ದಾರೆ. ಎಲ್ಲರ ಶ್ರಮದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ'' ಎಂದು ತಿಳಿಸಿದರು.