ಯಶ್ ಮತ್ತು ರಾಧಿಕಾ ಪಂಡಿತ್ ಭಾರತೀಯ ಚಿತ್ರರಂಗದ ರಾಕಿಂಗ್ ಕಪಲ್ ಎಂದೇ ಫೇಮಸ್. ಮೇಡ್ ಫರ್ ಈಚ್ ಅದರ್, ದಂಪತಿ ಅಥವಾ ಪ್ರೇಮಪಕ್ಷಿಗಳು ಇದ್ರೆ ಹೀಗಿರಬೇಕು ಅನ್ನೋ ಮೆಚ್ಚುಗೆಗಳು ವ್ಯಕ್ತವಾಗುತ್ತಲೇ ಇರುತ್ತವೆ. ಅದರಂತೆ ಈ ಜೋಡಿ ಯಶಸ್ವಿ ದಾಂಪತ್ಯ ಜೀವನ ನಡೆಸಿಕೊಂಡು ಬಂದಿದ್ದಾರೆ. ವೃತ್ತಿಜೀವನದ ಜೊತೆ ಜೊತೆಗೆ ದಂಪತಿಯ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು, ಅವರ ಫೋಟೋ ವಿಡಿಯೋಗಳನ್ನು ನೋಡಲು ಅಪಾರ ಸಂಖ್ಯೆಯ ಅಭಿಮಾನಿಗಳು ಕಾದಿರುತ್ತಾರೆ.
ಅದರಂತೆ ಇದೀಗ ನಟಿ ರಾಧಿಕಾ ಪಂಡಿತ್ ಸುಂದರ ಫೋಟೋಗಳನ್ನು ಒಟ್ಟುಗೂಡಿಸಿದ ಸ್ಪೆಷಲ್ ವಿಡಿಯೋ ಹಂಚಿಕೊಂಡಿದ್ದಾರೆ. ಪುತ್ರಿ ಐರಾ ಜನ್ಮದಿನದ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಂಚಿಕೊಂಡಿದ್ದಾರೆ. ''ಚಿಕ್ಕ ಕಾಲ್ಬೆರಳುಗಳಿಂದ ಹಿಡಿದು ಚಿನ್ನದಂತ ಹೃದಯದವರೆಗೆ... ಶುದ್ಧ ಪ್ರೀತಿ, ಸಂತೋಷದ ಕ್ಷಣಗಳಿಗೆ ಆರು ವರ್ಷಗಳು ಪೂರ್ಣ. ನಮ್ಮ ಐರಾಗೆ ಜನ್ಮದಿನದ ಶುಭಾಶಯಗಳು'' ಎಂದು ಬರೆದುಕೊಂಡಿದ್ದಾರೆ. ವಿಡಿಯೋ ಐರಾಳ ಕ್ಯೂಟ್ ಕ್ಷಣಗಳನ್ನು ಒಳಗೊಂಡಿದೆ. ಇಲ್ಲಿ ತಂದೆ ಯಶ್, ತಾಯಿ ರಾಧಿಕಾ ಪಂಡಿತ್, ತಮ್ಮ ಯಥರ್ವ್ನನ್ನು ಕಾಣಬಹುದು.
ಇದನ್ನೂ ಓದಿ: ಚಿತ್ರರಂಗಕ್ಕೆ ವಿದಾಯ ಘೋಷಿಸಿದ '12th ಫೇಲ್' ನಟ ವಿಕ್ರಾಂತ್ ಮಸ್ಸೆ ಆಸ್ತಿಯೆಷ್ಟು?
ರಾಧಿಕಾ ಪಂಡಿತ್ ಒಂದು ಕಾಲದಲ್ಲಿ ಚಿತ್ರರಂಗವನ್ನಾಳಿದ ನಟಿ. ತಮ್ಮದೇ ಆದ ಬೇಡಿಕೆ ಹೊಂದಿದ್ದ ಇವರು ಕಳೆದ ಆರೇಳು ವರ್ಷಗಳಿಂದ ಕುಟುಂಬ, ಮಕ್ಕಳೆಂದು ಬ್ಯುಸಿ ಆಗಿದ್ದಾರೆ. ಸಿನಿಮಾಗಳನ್ನು ಮಾಡದಿದ್ದರೂ ನಟಿಯ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕ ಸಾಧಿಸಿದ್ದಾರೆ. ಆಗಾಗ್ಗೆ ತಮ್ಮ ಮತ್ತು ಕುಟುಂಬದ ಸುಂದರ ಕ್ಷಣಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿರುತ್ತಾರೆ. ಅವರ ಪ್ರತೀ ಪೋಸ್ಟ್ ಕೂಡಾ ಸಖತ್ ಸದ್ದು ಮಾಡುತ್ತವೆ.
'ನಮ್ಮ ಮಕ್ಕಳನ್ನು ಪ್ರೀತಿಸಿ, ವಿಶೇಷ ಗೌರವ ಬೇಡ': ಸ್ವಯಂ ನಿರ್ಮಿತ ನಟ ಖ್ಯಾತಿಯ ರಾಕಿಂಗ್ ಸ್ಟಾರ್ ಯಶ್ ಅಮೋಘ ಅಭಿನಯ ಮಾತ್ರವಲ್ಲದೇ ತಮ್ಮ ನಡೆನುಡಿಯಿಂದಲೂ ಅಭಿಮಾನಿಗಳ ಹೃದಯದಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ. ಹೀಗೆ ವರ್ಷಗಳ ಹಿಂದೆ ಮಾತನಾಡಿದ್ದ ಇವರು, ''ನಮ್ಮ ಮಕ್ಕಳಿಗೆ ಈಗಲೇ ಯಾವುದೇ ರೀತಿಯ ಸ್ಥಾನಮಾನ, ವಿಶೇಷ ಗೌರವ ಕೊಡಬೇಡಿ. ಅವರನ್ನು ಪ್ರೀತಿಸಿ, ಆಶೀರ್ವದಿಸಿ. ಆದರೆ ಅವರು ತಮ್ಮ ಜೀವನದಲ್ಲಿ ಏನಾದರೂ ಸಾಧಿಸಿದ ಮೇಲೆಯೇ ಅವರಿಗೆ ಗೌರವ ಕೊಡಿ'' ಎಂದು ತಿಳಿಸಿದ್ದರು.
ಇದನ್ನೂ ಓದಿ: ರವಿಮಾಮನ ಹಳ್ಳಿಮೇಷ್ಟ್ರು ಸಹನಟಿ ಸಿಲ್ಕ್ ಸ್ಮಿತಾ ಬಯೋಪಿಕ್ ಅನೌನ್ಸ್: ಶೀರ್ಷಿಕೆಯೇ ಹೇಳುತ್ತಿದೆ ತಾರೆಯ ಜನಪ್ರಿಯತೆ
ರಾಕಿಂಗ್ ಸ್ಟಾರ್ನ ಮುಂದಿನ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಮಲಯಾಳಂ ನಿರ್ದೇಶಕಿ ಡೈರೆಕ್ಟರ್ ಗೀತು ಮೋಹನ್ ದಾಸ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಚಿತ್ರೀಕರಣ ಮುಂಬೈನಲ್ಲಿ ಸಾಗಿದೆ. ಯಶ್ ಕುಟುಂಬ ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ಫೋಟೋ ವಿಡಿಯೋಗಳು ಸಾಕಷ್ಟು ವೈರಲ್ ಆಗಿವೆ. ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆಯ ನಿರ್ಮಾಪಕ ವೆಂಕಟ್ ನಾರಾಯಣ್ ಕೋನಂಕಿ ಹಾಗೂ ಯಶ್ ಸೇರಿ 500 ಕೋಟಿ ರೂಪಾಯಿ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ಮುಂದಿನ ವರ್ಷ ಏಪ್ರಿಲ್ನಲ್ಲಿ ಅದ್ಧೂರಿಯಾಗಿ ಚಿತ್ರಮಂದಿರ ಪ್ರವೇಶಿಸಲಿದೆ.