ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಎಂಟನೇ ವಾರಾಂತ್ಯ ಬಂದು ತಲುಪಿದೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ರಜತ್ ಕಿಶನ್ ಮೊದಲ ವಾರದಲ್ಲೇ ಅವಾಚ್ಯ ಶಬ್ದ ಬಳಕೆ ಮಾಡಿದ್ದು, ವಾರಾಂತ್ಯದಲ್ಲಿ ಬಿಸಿ ಮುಟ್ಟಲಿದೆ ಎಂದು ಪ್ರೇಕ್ಷಕರ ಪೈಕಿ ಬಹುತೇಕರು ಅಂದಾಜಿಸಿದ್ದರು. ನಿರೀಕ್ಷೆಯಂತೆ ಇಂದಿನ ಸಂಚಿಕೆಯಲ್ಲಿ ರಜತ್ಗೆ ಕಿಚ್ಚನ ಕ್ಲಾಸ್ ಸಿಗಲಿದೆ.
ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆಂದ ಸ್ಪರ್ಧಿಗೆ ಸುದೀಪ್ ಪಾಠ ಮಾಡಲಿರದ್ದು, ಅದರ ಸುಳಿವನ್ನು ಇಂದು ಅನಾವರಣಗೊಂಡಿರುವ ಪ್ರೋಮೋ ಬಿಟ್ಟುಕೊಟ್ಟಿದೆ. ''ವರ್ಚಸ್ಸಿಗೂ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿಯೋಕೆ ಬಂದ್ರು ಕಿಚ್ಚ ಸುದೀಪ! ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಪ್ರಸಾರ'' ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. ಅಭಿನಯ ಚಕ್ರವರ್ತಿ ಸುದೀಪ್ ಅವರ ತೂಕದ ಮಾತುಗಳು ಪ್ರೇಕ್ಷಕರಿಗೆ ಹಿಡಿಸಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
''ಒಬ್ಬ ಮನುಷ್ಯನ ಬಾಯಿಂದ ಬರುವ ಪದಗಳು ಬರಿ ಮಾತಲ್ಲ, ಅವನ ವ್ಯಕ್ತಿತ್ವದ ವರ್ಚಸ್ಸು. ಒಂದು ಮಾತು ಗೆಲುವಿನ ಪಟ್ಟಾನು ಏರಿಸುತ್ತೆ, ಒಂದು ಮಾತು ಸೋಲಿನ ದಾರೀನೂ ಹಿಡಿಸುತ್ತೆ'' ಎಂಬ ಸುದೀಪ್ ಅವರ ಮಾತುಗಳೊಂದಿಗೆ ರಜತ್ ಕಿಶನ್ ಮತ್ತು ಗೋಲ್ಡ್ ಸುರೇಶ್ ಅವರ ಗಲಾಟೆಯ ವಿಡಿಯೋ ಹಾಕಲಾಗಿದೆ. ಅಲ್ಲಿಗೆ, ಇಂದು ರಜತ್ಗೆ ಕಿಚ್ಚನ ಕ್ಲಾಸ್ ಸಿಗೋದು ಪಕ್ಕಾ ಆಗಿದೆ. ಹಾಗಾಗಿ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
ಈಗಾಗಲೇ 50 ದಿನಗಳ ಕಾರ್ಯಕ್ರಮ ನಡೆದಿದ್ದು, ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಈ ವಾರದ ಆರಂಭದಲ್ಲಿ ಮನೆ ಪ್ರವೇಶಿಸಿದರು. ಅವರಿಬ್ಬರಿಗೂ ಇದು ಮೊದಲ ವಾರಾಂತ್ಯ. ಇವರಿಗೂ ಮುನ್ನ ಹನುಮಂತು ಅವರು ವೈಲ್ಡ್ ಕಾರ್ಡ್ ಮೂಲಕ ಮನೆ ಪ್ರವೇಶಿಸಿದ್ದರು. ಮೊದಲ ವೈಲ್ಡ್ಕಾರ್ಡ್ ಸ್ಪರ್ಧಿ ಆಗಿರುವ ಹನುಮಂತು ಅವರು ತಮ್ಮ ನಡೆ ನುಡಿಯಿಂದ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶ ಕಂಡಿದ್ದಾರೆ. ಎಂಟನೇ ವಾರಕ್ಕೆ ಮನೆ ಪ್ರವೇಶಿಸಿರುವ ಶೋಭಾ ಶೆಟ್ಟಿ ಮತ್ತು ರಜತ್ ಕಿಶನ್ ತಮ್ಮ ಏರುದನಿ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವುದರ ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಸಂಪಾದಿಸಿದ್ದಾರೆ.