ಚಿತ್ರದ ಶೀರ್ಷಿಕೆಯಿಂದಲೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಟಾಕ್ ಆಗುತ್ತಿರುವ ಸಿನಿಮಾ ಮ್ಯಾಕ್ಸ್. ವಿಕ್ರಾಂತ್ ರೋಣ ಚಿತ್ರದ ಬಳಿಕ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಸಿನಿಮಾ ಇದಾಗಿದೆ. ಹೀಗಾಗಿ ಕಿಚ್ಚನ ಅಭಿಮಾನಿ ಬಳಗ ದೊಡ್ಡ ಮಟ್ಟದ ನಿರೀಕ್ಷೆ ಇಟ್ಟುಕೊಂಡಿದೆ. ಇತ್ತೀಚೆಗೆ ರಿವೀಲ್ ಆದ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಿಚ್ಚನ ಮ್ಯಾಕ್ಸ್ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು.
ಆದರೆ ಈ ಚಿತ್ರದ ಗ್ರಾಫಿಕ್ಸ್ ಹಾಗು ವಿಎಫ್ಎಕ್ಸ್ ಕೆಲಸ ಮುಗಿಯದ ಕಾರಣ ಮ್ಯಾಕ್ಸ್ ಚಿತ್ರದ ಬಿಡುಗಡೆ ತಡವಾಗುತ್ತಿದೆ. ಇನ್ನೇನು 2024ನೇ ವರ್ಷ ಮುಗಿಯೋದಿಕ್ಕೆ ಬಂತು, ಯಾವಾಗ ಮ್ಯಾಕ್ಸ್ ಚಿತ್ರ ಬಿಡುಗಡೆ ಆಗುತ್ತೆ ಎಂದು ಸುದೀಪ್ ಅಭಿಮಾನಿಗಳು ಎದುರು ನೋಡ್ತಾ ಇದ್ದಾರೆ. ಇದರ ಬೆನ್ನಲ್ಲೇ ಮ್ಯಾಕ್ಸ್ ಚಿತ್ರತಂಡ ಸಣ್ಣ ಟೀಸರ್ ಮೂಲಕ ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಿದೆ.
ಸದ್ಯ ಅನಾವರಣಗೊಂಡಿರುವ ಮ್ಯಾಕ್ಸ್ ಟೀಸರ್ ನೋಡಿದರೆ ಇದೊಂದು ಪಕ್ಕಾ ಮಾಸ್ ಆ್ಯಕ್ಷನ್ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಕಿಚ್ಚ ಮಾಸ್ ಅವತಾರದಲ್ಲಿ ಅಬ್ಬರಿಸಿರೋದು ಟೀಸರ್ನಲ್ಲಿ ಗೊತ್ತಾಗಿದೆ. ಆದ್ರೆ ಈ ಸಿನಿಮಾದಲ್ಲಿ ಕಿಚ್ಚ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿರೋದು ಈ ಚಿತ್ರದ ಹೈಲೆಟ್ಸ್.
ಇನ್ನು ಚಿತ್ರದಲ್ಲಿ ಸುದೀಪ್ ಭರ್ಜರಿ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಈ ಟೀಸರ್ ಸಾಕ್ಷಿ. ಆ್ಯಕ್ಷನ್ ದೃಶ್ಯಗಳು ಮೈಜುಂ ಎನ್ನಿಸುವಂತಿದ್ದು, ಅಭಿಮಾನಿಗಳ ಕಣ್ಮನ ಸೆಳೆದಿದೆ. ಟೀಸರ್‌ನ ಕೊನೆಯಲ್ಲಿ ಬರುವ ಸುದೀಪ್ ಡ್ಯಾನ್ಸ್ ದೃಶ್ಯವು ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ಭರ್ಜರಿ ಟ್ರೀಟ್ ಕೊಡುವಂತಿದೆ.