'ಗಂಟುಮೂಟೆ' ಚಿತ್ರತಂಡದಿಂದ ರೂಪಗೊಂಡಿರುವ 'ಕೆಂಡ' ಚಿತ್ರ ಹಂತ-ಹಂತವಾಗಿ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಹೆಚ್ಚಿಸುತ್ತಿದೆ. ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಜಯಂತ್ ಕಾಯ್ಕಿಣಿ ರಚಿಸಿದ ''ತಾಜಾ ತಾಜಾ ಸುದ್ದಿ'' ಗೀತೆಗೆ ಪುತ್ರ ರಿತ್ವಿಕ್ ಕಾಯ್ಕಿಣಿ ಮೊದಲ ಬಾರಿ ಸಂಗೀತ ಸಂಯೋಜಿಸಿದ್ದು, ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತು.
ತಂಡಕ್ಕೆ ಶುಭಹಾರೈಸಲು ನಿರ್ದೇಶಕ ಯೋಗರಾಜ್ ಭಟ್, ಸಂಗೀತ ಸಂಯೋಜಕ ವಿ. ಹರಿಕೃಷ್ಣ, ನಿರ್ಮಾಪಕಿ ಶೈಲಜಾ ನಾಗ್ ಮತ್ತು ಜಯಂತ್ ಕಾಯ್ಕಿಣಿ ಆಗಮಿಸಿದ್ದರು. ನಿರ್ದೇಶಕಿ ರೂಪಾ ರಾವ್ ಕೆಂಡ ಚಿತ್ರದ ಮೂಲಕ ನಿರ್ಮಾಪಕಿಯಾಗಿದ್ದಾರೆ. ಸಹದೇವ ಕೆಲವಡಿ ಛಾಯಾಗ್ರಹಣ, ನಿರ್ದೇಶನದ ಜೊತೆಗೆ ನಿರ್ಮಾಣದಲ್ಲಿಯೂ ಭಾಗಿಯಾಗಿದ್ದಾರೆ.
ಈವೆಂಟ್ನಲ್ಲಿ ವಿಕಟ ಕವಿ ಯೋಗರಾಜ್ ಭಟ್ ಮಾತನಾಡಿ, ಎರಡನೇ ಲಾಕ್‍ಡೌನ್ ಸಂದರ್ಭ ರಿತ್ವಿಕ್ ಕಾಯ್ಕಿಣಿ ಜೊತೆ ದೋಸ್ತಿ ಶುರುವಾಯಿತು. ಸದ್ಯದ ಪರಿಸ್ಥಿತಿಯಲ್ಲಿ ಹಾಡಿಲ್ಲದೇ ಸಿನಿಮಾ ಬಿಡುಗಡೆ ಅಂತಾ ಬಂದಾಗ ಎರಡು ತರದ ಅಪಾಯದಲ್ಲಿ ತಗಲಾಕೊಳ್ತಾರೆ. ಬೆಳಗ್ಗೆ ಸ್ನಾನದ ಕೋಣೆಯಲ್ಲಿರುವಾಗ ನನ್ನ ಹಾಡು ಇಡೀ ಪ್ರಪಂಚ ತಿರುಗಿ ನೋಡುತ್ತೆ ಎನ್ನುವ ಕನಸು. ಹೊರಗೆ ಬಂದಾಗ ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಒಂದು ವರ್ಷ ಕಷ್ಟಪಟ್ಟು ಚಿತ್ರ ಬಿಡುಗಡೆ ಮಾಡಿದ ನಂತರ, ಚಿತ್ರಮಂದಿರದಿಂದ ಆಚೆ ಬರುವ ಪ್ರೇಕ್ಷಕ ಮುಂದೆ ಯಾವುದು ಎಂದು ಕೇಳುತ್ತಾನೆ. ಆಗ ಅದಕ್ಕಿಂತಲೂ ಉತ್ತಮವಾದುದನ್ನು ಕೊಡಬೇಕು ಎನ್ನುವ ಛಲ ಹುಟ್ಟಿಕೊಳ್ಳುವುದು ಒಂಥರಾ ಡೇಂಜರ್. ನಾನು ಅಂದುಕೊಂಡಿದ್ದು ಏನೂ ಇಲ್ಲ. ಹಾಗೆ ನಾಲ್ಕು ಮಂದಿ ತಿರುಗಿ ನೋಡುವಂತೆ ಮಾಡೋದು ಬಹಳ ಕಷ್ಟದ ಕೆಲಸ. ಅಲ್ಲಿ ಸಕ್ಸಸ್ ಕಂಡರೆ, ಇಲ್ಲಿ ವಿರುದ್ಧವಾಗಿರುತ್ತದೆ. ಪ್ರತೀ ಸಿನಿಮಾ ಇವರೆಡು ಡೇಂಜರ್ಗಳ ಮಧ್ಯೆ ಬದುಕಬೇಕು. ಇವರೆಡು ಡೇಂಜರ್ಗಳ ಮಧ್ಯೆ ಇರೋದು ಸೃಜನಾತ್ಮಕ ಕ್ರಿಯೆ. ಇವೆಲ್ಲವೂ ನಿಮ್ಮನ್ನು ಸದಾ ಕಾಲ ಕಾಡಲಿ ಎಂದು ತಿಳಿಸಿದರು.
ವಿ. ಹರಿಕೃಷ್ಣ ಮಾತನಾಡಿ, ಹಾಡು ಅನ್ನೋದು ಮಾರ್ಕೆಟ್ನಲ್ಲಿ ಎಷ್ಟು ಇದೆ ಅಂದರೆ, ನೂರಾರು ಹಾಡುಗಳ ಮಧ್ಯೆ ನಮ್ಮ ಗೀತೆಯನ್ನು ಹುಡುಕುವುದು ಸವಾಲಿನ ಕೆಲಸ ಆಗಿರುತ್ತದೆ. ಅವುಗಳ ಮಧ್ಯೆ ನಮ್ಮ ಸಾಂಗ್ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಸಂಗೀತ ನಿರ್ದೇಶಕನ ಆಸೆಯಾಗಿರುತ್ತದೆ. ಬರಹಗಾರನ ಶ್ರಮ ಗೆದ್ದಾಗ ಖುಷಿ ಕೊಡುತ್ತದೆ. ಸೋತಾಗ ಜವಾಬ್ದಾರಿ ಹೆಚ್ಚಾಗುತ್ತದೆ. ಇದರಲ್ಲಿರುವ ಮೂರು ಗೀತೆಗಳಲ್ಲಿ ಯಾವುದೇ ಸಂಗೀತದ ಛಾಯೆ ಕಾಣಿಸುವುದಿಲ್ಲ. ಅದೇ ತಂಡದ ಮೊದಲ ಗೆಲುವು ಎನ್ನಬಹದು. ಅದನ್ನು ಆಲಿಸಿದಾಗ ಹೊಸತನ ಕಂಡುಬರುತ್ತದೆ. ಹೀಗೆ ನಿಮ್ಮ ವಿನೂತನ ಪ್ರಯತ್ನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕೆಲವು ಬಾರಿ ಹಾಡು ಬರೆಯುವಾಗ, ಈ ಸಾಲು ಎಲ್ಲೋ ಬಂದಿದೆಯೆಲ್ಲಾ ಎಂದು ಪಕ್ಕಕ್ಕೆ ಇಟ್ಟಿದ್ದುಂಟು. ಆಮೇಲೆ ನಾನೇ ಬರೆದದ್ದು ಅಂತಾ ಗೊತ್ತಾಗುತ್ತದೆ. ತಂತ್ರಜ್ಞಾನ ಬದಲಾದಂತೆ ಮೂಲ ಹಾಡನ್ನು ಯಾರೂ ಕೇಳುವುದಿಲ್ಲ. ಕೇವಲ ನಾಲ್ಕು ಸಾಲುಗಳನ್ನು ಆಲಿಸುತ್ತಾರೆ. ಇದರಿಂದಾಗಿ ಕಲೆಯ ಮೇಲೆ ಜವಾಬ್ದಾರಿ ಮತ್ತು ಚ್ಯಾಲೆಂಜ್ ಬಹಳ ಜಾಸ್ತಿ ಇರುತ್ತದೆ. ಇದಕ್ಕಾಗಿ ತಂಡಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇನೆ. ಮಗ ತನಗೆ ಇಷ್ಟವಾದುದನ್ನು ಮಾಡಿದ್ದರಿಂದ ಖುಷಿಯಾಗಿದೆ. ನಿರ್ದೇಶಕರು ಹಾಡು ಬರೆದುಕೊಡಿ ಎಂದು ಕೇಳಿಕೊಂಡು ಬಂದಾಗ, ನನ್ನ ಹಾಡು ಹಿಟ್ ಆಗಲೆಂದು ಬರೆಯುತ್ತೇನೆ. ಅದರಿಂದ ನಿಮ್ಮ ಚಿತ್ರಕ್ಕೆ ಸಹಾಯವಾಗಲಿ ಎಂಬುದು ನಮ್ಮ ಆಶಯವಾಗಿರುತ್ತದೆ. ಹಾಡು ಚಿತ್ರದ ನಿರೂಪಣೆಯ ಭಾಗವಾಗಿರುತ್ತದೆ. ಇಂತಹ ಹೊಸ ತಲೆಮಾರಿನ ಚಿತ್ರಗಳು ಜನರಿಗೆ ತಲುಪಲಿ ಎಂದು ಜಯಂತ್ ಕಾಯ್ಕಿಣಿ ತಿಳಿಸಿದರು.