ಹೈದರಾಬಾದ್: ನಾಗ ಚೈತನ್ಯ ವಿಚ್ಛೇದನದ ಕುರಿತು ತೆಲಂಗಾಣ ಸಚಿವೆ ಕೊಂಡಾ ಸುರೇಖಾ ನೀಡಿದ ಹೇಳಿಕೆಗೆ ನಟಿ ಸಮಂತಾ ತೀವ್ರವಾಗಿ ಖಂಡಿಸಿದ್ದಾರೆ. ಸಚಿವರ ಇಂತಹ ಹೇಳಿಕೆ ಬಗ್ಗೆ ಸಮಂತಾ ಮಾತ್ರವಲ್ಲ, ನಟ ನಾಗಾರ್ಜುನ ಸಹ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.
ಸಮಂತಾ ಮತ್ತು ನಾಗ ಚೈತನ್ಯ ಮದುವೆ ಮುರಿದು ಬೀಳುವಲ್ಲಿ ಬಿಆರ್‌ಎಸ್ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್ ಅವರ ಪಾತ್ರವಿದೆ ಎಂದು ಕೊಂಡ ಸುರೇಖಾ ಅವರು ಆಡಿತ ಮಾತು ತೆಲಂಗಾಣ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿದೆ. ಸಚಿವರ ಈ ಹೇಳಿಕೆಗೆ ತಕ್ಷಣ ಪ್ರತಿಕ್ರಿಯೆ ನೀಡಿರುವ ನಟ ನಾಗಾರ್ಜುನ, ಸಂಪೂರ್ಣವಾಗಿ ಅಪ್ರಸ್ತುತ ಮತ್ತು ಸುಳ್ಳು ಎಂದು ತಳ್ಳಿ ಹಾಕಿದ್ದಾರೆ. ಜನರ ಖಾಸಗಿತನದ ವಿಚಾರವನ್ನು ಗೌರವಿಸಿ ಎಂದು ತೆಲುಗಿನಲ್ಲಿ ಟ್ವೀಟ್ ಮಾಡಿರುವ ಅವರು, ಸಚಿವರಾದ ಕೊಂಡ ಸುರೇಖಾ ಅವರ ಹೇಳಿಕೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ರಾಜಕೀಯದಿಂದ ದೂರವಿರುವ ಚಲನಚಿತ್ರ ತಾರೆಯರ ಬದುಕನ್ನು ದಾಳವಾಗಿ ಬಳಕೆ ಮಾಡಿಕೊಂಡು ನಿಮ್ಮ ವಿರೋಧಿಗಳನ್ನು ಟೀಕಿಸಲು ಬಳಸಬೇಡಿ. ದಯವಿಟ್ಟು ಇತರರನ್ನು ಗೌರವಿಸಿ ಎಂದು ಮನವಿ ಕೂಡಾ ಮಾಡಿದ್ದಾರೆ.
ನಟಿ ಸಮಂತಾ ಬೇಸರ: ನಾಗ ಚೈತನ್ಯ ಅವರಿಂದ ಡಿವೋರ್ಸ್ ಪಡೆದುಕೊಳ್ಳಲು ಕೆಟಿಆರ್ ಕಾರಣ ಎಂಬ ಹೇಳಿಕೆ ಬಗ್ಗೆ ನಟಿ ಸಮಂತಾ ತೀವ್ರ ಬೇಸರ ಹೊರ ಹಾಕಿದ್ದಾರೆ. ಬೇರ್ಪಡುವಲ್ಲಿ ಕೆಟಿಆರ್ ಅವರ ಪ್ರಭಾವದ ಬಗ್ಗೆ ಸುರೇಖಾ ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ನಿರಾಶೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ಉದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿರುವ ಅವರು, ಮಹಿಳೆ ಹೊರಗೆ ಬಂದು ಕೆಲಸ ಮಾಡಲು ಸಾಕಷ್ಟು ಧೈರ್ಯ ಮತ್ತು ಶಕ್ತಿ ಬೇಕಾಗುತ್ತದೆ ಎಂದಿದ್ದಾರೆ