ಬಾಲಿವುಡ್ ಯಂಗ್ ಸ್ಟಾರ್ ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ 'ಚಂದು ಚಾಂಪಿಯನ್'. ನೈಜ ಕಥೆಯೊಂದಿಗೆ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದ್ದಾರೆ. ಕಳೆದ ಎಂಟು ತಿಂಗಳಿನಿಂದ ಕಾರ್ತಿಕ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಬುಧವಾರ ಶೂಟಿಂಗ್ ಪೂರ್ಣಗೊಂಡಿದೆ. ಇದನ್ನು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಸ್ವತಃ ನಟನೇ ಘೋಷಿಸಿದ್ದಾರೆ. ಚಿತ್ರೀಕರಣದ ಅಂತಿಮ ದಿನದಂದು ನಟ ತಮ್ಮ ಮೆಚ್ಚಿನ ಸಿಹಿ ಖಾದ್ಯ ರಸ್ಮಲಾಯಿ ಸವಿದು ಖುಷಿ ಪಟ್ಟಿದ್ದಾರೆ. ಇದನ್ನು 'ವಿಜಯ' ಎಂದು ಉಲ್ಲೇಖಿಸಿದ್ದಾರೆ.
ಕೊನೆಯದಾಗಿ ಸತ್ಯಪ್ರೇಮ್ ಕಿ ಕಥಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಕಾರ್ತಿಕ್ ಆರ್ಯನ್ ತಮ್ಮ 'ಚಂದು ಚಾಂಪಿಯನ್' ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದಾರೆ. ಬುಧವಾರ, ನಿರ್ದೇಶಕ ಕಬೀರ್ ಖಾನ್ ನೀಡಿದ ರಸ್ಮಲಾಯಿ ಸವಿದ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಚಂದು ಚಾಂಪಿಯನ್ ಸಿನಿಮಾದಲ್ಲಿ ಕ್ರೀಡಾಪಟು ಪಾತ್ರ ನಿರ್ವಹಿಸಲು ಕಾರ್ತಿಕ್ ದೈಹಿಕ ನೋಟದ ಬದಲಾವಣೆಗೆ ಒಳಗಾಗಬೇಕಿತ್ತು. ಈ ಹಿನ್ನೆಲೆ ಕಠಿಣ ಡಯೆಟ್ ಅನ್ನು ಫಾಲೋ ಮಾಡಿದ್ದರು. ಸುಮಾರು ಒಂದು ವರ್ಷದ ಬಳಿಕ ರಸ್ಮಲಾಯಿ ಸವಿದು ಸಂತಸಪಟ್ಟಿದ್ದಾರೆ.
ಕಾರ್ತಿಕ್ ಅವರು ಕಬೀರ್ ಖಾನ್ ಸೇರಿದಂತೆ ಚಿತ್ರತಂಡದವರೊಂದಿಗಿರುವ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಈ ದೃಶ್ಯದಲ್ಲಿ, ಕಬೀರ್ ಅವರು ಕಾರ್ತಿಕ್‌ಗೆ ಫುಲ್ ಪ್ಲೇಟ್ ರಸ್ಮಲಾಯಿ ತಿನ್ನಿಸುತ್ತಿರೋದನ್ನು ಕಾಣಬಹುದು. ನಂತರ ನಟ-ನಿರ್ದೇಶಕರು ತಬ್ಬಿಕೊಂಡರು. ಸಂಪೂರ್ಣ ಚಿತ್ರತಂಡ ಸಂತಸದ ಕ್ಷಣಗಳನ್ನು ಹಂಚಿಕೊಂಡಿತು.