ಬಾಲಿವುಡ್ನ ಯುವನಟ ಕಾರ್ತಿಕ್ ಆರ್ಯನ್ ನಟನೆಯ 'ಚಂದು ಚಾಂಪಿಯನ್' ತೆರೆಕಂಡ ಎರಡು ದಿನಗಳಲ್ಲಿ 13.1 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ನಿರ್ಮಾಪಕ ಇಂದು ಬಹಿರಂಗಪಡಿಸಿದ್ದಾರೆ. ಕಬೀರ್ ಖಾನ್ ಆ್ಯಕ್ಷನ್ ಕಟ್ ಹೇಳಿರುವ ಸ್ಪೋರ್ಟ್ಸ್ ಡ್ರಾಮಾ ಭಾರತದ ಮೊದಲ ಪ್ಯಾರಾಲಿಂಪಿಕ್ ಗೋಲ್ಡ್ ಮೆಡಲ್ ವಿಜೇತ ಮುರಳಿಕಾಂತ್ ಪೇಟ್ಕರ್ ಅವರ ಜೀವನವನ್ನಾಧರಿಸಿದೆ.
ಶುಕ್ರವಾರ ಚಿತ್ರಮಂದಿರ ಪ್ರವೇಶಿಸಿದ 'ಚಂದು ಚಾಂಪಿಯನ್' ಮೊದಲ ದಿನ 5.40 ಕೋಟಿ ರೂ. ಕಲೆಕ್ಷನ್ ಮಾಡಿದೆ. ಎರಡು ದಿನಗಳ ಒಟ್ಟು ಗಳಿಕೆ 13.1 ಕೋಟಿ ರೂಪಾಯಿ ಆಗಿದೆ. ಚಿತ್ರ ನಿರ್ಣಾಯಕ ಹಂತ ಮೊದಲ ಸೋಮವಾರದ ಪರೀಕ್ಷೆಯಲ್ಲಿ ಉತ್ತೀರ್ಣವಾಗಲು ಬಾಕ್ಸ್ ಆಫೀಸ್‌ನಲ್ಲಿ ಇದೇ ರೀತಿ ಉತ್ತಮ ಸಂಖ್ಯೆಗಳೊಂದಿಗೆ ಸಾಗಬೇಕಿದೆ.
ನಿರ್ಮಾಪಕರು ತಮ್ಮ ಹೇಳಿಕೆಯಲ್ಲಿ, 'ಚಂದು ಚಾಂಪಿಯನ್' ಎರಡನೇ ದಿನ ಬಾಕ್ಸ್ ಆಫೀಸ್‌ನಲ್ಲಿ ಏರಿಕೆ ಕಂಡಿದೆ. "ಕಾರ್ತಿಕ್ ಆರ್ಯನ್ ಅವರ ಚಂದು ಚಾಂಪಿಯನ್ ಕಲೆಕ್ಷನ್ನಲ್ಲಿ ಎರಡನೇ ದಿನದಂದು ಶೇ. 45ರಷ್ಟು ಏರಿಕೆಯಾಗಿದೆ. ಎರಡನೇ ದಿನ 7.70 ಕೋಟಿ ರೂ. ಸಂಪಾದಿಸಿದೆ. ಮೊದಲ ದಿನದ 5.40 ಕೋಟಿ ರೂ. ಗಳಿಕೆಯೊಂದಿಗೆ, ಚಿತ್ರ ಒಟ್ಟು 13.10 ಕೋಟಿ ರೂ.ನ ವ್ಯವಹಾರ ನಡೆಸಿದೆ" ಎಂದು ತಿಳಿಸಿದ್ದಾರೆ.
ಚಂದು ಚಾಂಪಿಯನ್ ಚಿತ್ರದ ಕಥಾಹಂದರ ಕಾರ್ತಿಕ್ ಆರ್ಯನ್ ಅವರ ಪಾತ್ರ ಮುರಳಿಕಾಂತ್ ಪೇಟ್ಕರ್ ಸುತ್ತ ಸುತ್ತುತ್ತದೆ. ಭಾರತೀಯ ಸೇನೆಯ ಸೈನಿಕ, ಕುಸ್ತಿಪಟು, 1965ರ ಯುದ್ಧದ ಅನುಭವ ಮತ್ತು ಈಜುಗಾರನಾಗಿ ಅವರ ಜೀವನದ ವಿವಿಧ ಅಂಶಗಳನ್ನು ತೋರಿಸಿದೆ.