ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ರಾಜಾತಿಥ್ಯ ಸಿಗುತ್ತಿದೆ ಎನ್ನಲಾದ ಫೋಟೋ ಸೋಷಿಯಲ್ ಮೀಡಿಯಾಗಳಲ್ಲಿ ಶರವೇಗದಲ್ಲಿ ವೈರಲ್ ಆದ ಬೆನ್ನಲ್ಲೇ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಗೊಳಿಸಲಾಗಿದೆ. ಇಂದು ನಟನ 2003ರ ಸಿನಿಮಾ 'ಕರಿಯ' ಮರು ಬಿಡುಗಡೆ ಆಗಿದ್ದು, ಹೆಚ್ಚಿನ ಸಂಖ್ಯೆಯ ಅಭಿಮಾನಿಗಳು ಬಂದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಜೊತೆಗೆ ಕೆಲವರು ಒಂದಿಷ್ಟು ಅವಾಂತರವನ್ನೂ ಸೃಷ್ಟಿಸಿದ್ದಾರೆ.
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿಂದು ನಟ ದರ್ಶನ್ ಮುಖ್ಯಭೂಮಿಕೆಯ ಸೂಪರ್ ಹಿಟ್ 'ಕರಿಯ' ಸಿನಿಮಾ ರೀ ರಿಲೀಸ್ ಆಗಿದೆ. ಮರು ಬಿಡುಗಡೆಯಾಗಿರುವ 'ಕರಿಯ' ಸಿನಿಮಾ ವೀಕ್ಷಣೆಗೆ ಬಂದ ಕೆಲ ಅಭಿಮಾನಿಗಳು ಮಾಧ್ಯಮದವರ ವಿರುದ್ಧ ಘೊಷಣೆ ಕೂಗಿದ್ದಾರೆ. ಈ ವೇಳೆ ಪೊಲೀಸ್ ಅಧಿಕಾರಿ ಫ್ಯಾನ್ಸ್ಗೆ ಕಿವಿಮಾತು ಹೇಳಿದ್ದಾರೆ.
ಮೊದಲು ಮಾಗಡಿ ಪೊಲೀಸರು ಚಿತ್ರಮಂದಿರದ ಬಳಿ ಬೀಡು ಬಿಟ್ಟಿದ್ದರು. ಮಾಧ್ಯಮದವರ ವಿರುದ್ಧ ಘೋಷಣೆ ಕೂಗಿದ ಕೆಲವರನ್ನು ಉದ್ದೇಶಿಸಿ ಮಾತನಾಡಿದ ಪೊಲೀಸ್ ಅಧಿಕಾರಿ, ''ನಿಮ್ಮಂಥ ಕೆಲ ಕೆಟ್ಟ ಅಭಿಮಾನಿಗಳಿಂದಲೇ ದರ್ಶನ್ ಅವರಿಗೆ ಕೆಟ್ಟ ಹೆಸರು. ಸಿನಿಮಾ ವೀಕ್ಷಿಸಿ ಎಂಜಾಯ್ ಮಾಡಿ. ಅದನ್ನು ಬಿಟ್ಟು ಯಾರ್ಯಾರಿಗೋ ಬೈಯುವ ಕೆಲಸ ಮಾಡಬೇಡಿ. ಇಂಥ ಕೆಲವರಿಂದಲೇ ನಟನ ಹೆಸರು ಹಾಳಾಗುತ್ತಿರೋದು'' ಎಂದು ತಿಳಿಸಿದ್ದಾರೆ. ಮೀಡಿಯಾ ಬಗ್ಗೆ ಕೆಟ್ಟ ಪದಗಳನ್ನು ಬಳಸಿ ಧಿಕ್ಕಾರ ಕೂಗುವುದನ್ನು ನಿಲ್ಲಿಸಿ ಎಂದು ಗದರಿದ ಪೊಲೀಸ್, ಹೀಗೆ ಮಾಡದಂತೆ ಕಿವಿಮಾತು ಹೇಳಿದ್ದಾರೆ.
ಪ್ರಸನ್ನ ಥಿಯೇಟರ್ ಬಳಿ ಸುಮಾರು ಹತ್ತು ಪೊಲೀಸರು ನಿಯೋಜನೆಗೊಂಡಿದ್ದಾರೆ. ಬಾಡಿ ವೋರ್ನ್ ಕ್ಯಾಮರಾ ಹಾಕಿಕೊಂಡು ಪೊಲೀಸರು ಪರಿಸ್ಥಿತಿ ನಿಯಂತ್ರಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆಂದು ಪೊಲೀಸರು ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಚಿತ್ರಮಂದಿರದ ಬಳಿ ಇರುವ ಅಭಿಮಾನಿಗಳ ಮೇಲೆ ಒಂದು ಕಣ್ಣಿಟ್ಟಿದ್ದಾರೆ.
ದರ್ಶನ್ ಪರಪ್ಪನ ಆಗ್ರಹಾರ ಜೈಲಿನಲ್ಲಿ ಸಿಗರೇಟ್ ಹಾಗೂ ಕಾಫಿ ಮಗ್ ಹಿಡಿದು ಕುಳಿತಿರುವ ಫೋಟೋ ಬಳಸಿ ಮಾಡಿದ್ದ ಪೋಸ್ಟರ್ ಅನ್ನು ಚಿತ್ರಮಂದಿರದ ಬಳಿ ಹಾಕಲಾಗಿತ್ತು. ''ದಿಸ್ ಈಸ್ ನಾಟ್ ಎ ಬ್ಯಾನರ್ ದೀಸ್ ಈಸ್ ಎ ಹ್ಯಾಂಡ್ ಮೇಡ್ ಆರ್ಟ್ ನಂಬರ್ 511, ಖೈದಿ ನಂಬರ್ 6016'' ಎಂದು ಬರೆದಿರುವ ಪೋಸ್ಟರ್ ಅನ್ನು ಪ್ರಸನ್ನ ಥಿಯೇಟರ್ ಮೇಲೆ ಹಾಕಲಾಗಿತ್ತು.