ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಹಾಗೂ ಡ್ಯಾನ್ಸ್ ಕಿಂಗ್ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸಿರುವ ಬಹುನಿರೀಕ್ಷಿತ ಚಿತ್ರ 'ಕರಟಕ ದಮನಕ'. ವಿಭಿನ್ನ ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರದ ಕ್ಯಾರೆಕ್ಟರ್ ಟೀಸರ್ ರಿವೀಲ್ ಆಗಿದೆ.
ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಮಾಡಿದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟೀಸರ್ನಲ್ಲಿ ಶಿವರಾಜ್ಕುಮಾರ್ ಮತ್ತು ಪ್ರಭುದೇವ ಅವರು, ನಾಗರಾಜ್ ಹಾಗೂ ಬಸವರಾಜ್ ಎಂಬ ವಿಭಿನ್ನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಜೊತೆಗೆ, ನಾಯಕಿಯರಾದ ಪ್ರಿಯಾ ಆನಂದ್ ಹಾಗೂ ನಿಶ್ವಿಕಾ ನಾಯ್ಡು ಪಾತ್ರಗಳೂ ಸಹ ಇಂಪ್ರೆಸ್ ಮಾಡುತ್ತಿವೆ. ಆನಂದ್ ಆಡಿಯೋ ಮೂಲಕ ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಆಗಿದೆ.
ಲವ್ ಸ್ಟೋರಿ ಹಾಗೂ ಫಿಲಾಸಫಿ ಚಿತ್ರಗಳಿಗೆ ಬ್ರಾಂಡ್ ಆಗಿರುವ ನಿರ್ದೇಶಕ ಯೋಗರಾಜ್ ಭಟ್, ಈ ಬಾರಿ ಸಂದೇಶ ಸಾರುವ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಭಟ್ಟರೇ ಹೇಳುವ ಹಾಗೆ, ''ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ, ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ಬಗ್ಗೆ ತಲೆ ಕೆಡಿಸಿಕೊಂಡು ಇತಿಹಾಸವಾದವು. ಆ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವರೂಪ ತಾಳುವ ಮೂಲಕ ಸಮಾಜಕ್ಕೆ ಹೇಗೆ ಒಳ್ಳೆಯದನ್ನು ಮಾಡುತ್ತವೆ ಎಂಬುದು ಈ ಚಿತ್ರದ ಕಥೆ. ಎಲ್ಲರೂ ಸಿನಿಮಾ ನೋಡಬೇಕು'' ಎಂದರು.