ಕರಣ್ ಜೋಹರ್, ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ. ಇತ್ತೀಚೆಗೆ, ತಾವು ಬದುಕಿನಲ್ಲಿ ಎದುರಿಸಿದ ಮಾನಸಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಬಾಡಿ ಡಿಸ್ಮಾರ್ಫಿಯಾ (Body Dysmorphia) ಸಮಸ್ಯೆಯಿಂದ ಬಳಲುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ. ಈ ಸಮಸ್ಯೆಯಿರುವ ಜನರು ತಮ್ಮ ನೋಟ ಮತ್ತು ದೇಹದ ನ್ಯೂನತೆಗಳ ಬಗ್ಗೆ ಅತಿಯಾಗಿ ಯೋಚಿಸಿ ಅತೀವ ತೊಂದರೆಗೊಳಗಾಗುತ್ತಾರೆ.
ಬಾಲ್ಯದಲ್ಲಿ ತಮಗೆ ಅತ್ಯುತ್ತಮ ಧ್ವನಿ ಇರಲಿಲ್ಲ ಎಂಬ ಕಾರಣಕ್ಕೆ ಗುಟ್ಟಾಗಿ ವಾಯ್ಸ್ ಮಾಡ್ಯುಲೇಷನ್ ಕ್ಲಾಸ್ಗಳಿಗೆ ಹಾಜರಾಗಿದ್ದಾಗಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಅಲ್ಲದೇ ತಾನು ಇತರೆ ಹುಡುಗರಂತೆ ಇಲ್ಲ ಎಂದು ಅನೇಕ ಸಂದರ್ಭಗಳಲ್ಲಿ ಬೇಸರಗೊಂಡಿದ್ದನ್ನೂ ಬಹಿರಂಗಪಡಿಸಿದರು.
"ನನ್ನ ದನಿ ಬಹಳ ಮೃದುವಾಗಿ ಹುಡುಗಿಯಂತಿದೆ ಎಂದು ಮುಜುಗರಕ್ಕೊಳಗಾಗಿದ್ದೆ. ಅದನ್ನು ಸರಿಪಡಿಸಲು ನಾನು ಓರ್ವರ ಸಲಹೆಯ ಮೇರೆಗೆ ಸ್ಪೀಕಿಂಗ್ ಕ್ಲಾಸ್ಗೆ ಸೇರಿಕೊಂಡೆ. ಈ ವಿಚಾರವನ್ನು ಮನೆಯಲ್ಲಿ ಮುಚ್ಚಿಟ್ಟೆ. ಕಂಪ್ಯೂಟರ್ ಕ್ಲಾಸ್ಗೆ ಹೋಗುವುದಾಗಿ ತಂದೆಗೆ ತಿಳಿಸಿ, ವಾಯ್ಸ್ ಮಾಡ್ಯೂಲೇಶನ್ ಕ್ಲಾಸ್ಗೆ ಹಾಜರಾಗಿದ್ದೆ" ಎಂದು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ನಿರ್ದೇಶಕ ತಿಳಿಸಿದರು.
"ಬಾಲ್ಯದಲ್ಲಿ, ಹೆತ್ತವರು ಬಯಸಿದ ರೀತಿ ಆಗುವಲ್ಲಿ ವಿಫಲನಾಗಿದ್ದೇನೆ ಎಂದು ಭಾವಿಸುತ್ತಿದ್ದೆ. ಒಮ್ಮೆ, ಪ್ರತಿಭಾ ಸ್ಪರ್ಧೆಯಲ್ಲಿ ಎಲ್ಲರೂ ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದರು. ನಾನೂ ಮಾಡಿದ್ದೆ. ಕೆಲವರು ನನ್ನನ್ನು ಅಣಕಿಸಿ, ನಗಲು ಪ್ರಾರಂಭಿಸಿದರು. ನನ್ನ ತಾಯಿ ಕೂಡಾ ಅಲ್ಲಿ ಪ್ರೇಕ್ಷಕರಾಗಿ ಕುಳಿತಿದ್ದರು. ಮನೆಗೆ ಹೋಗಿ ಬಹಳ ಕಣ್ಣೀರಿಟ್ಟಿದ್ದೆ. ನಾನೇಕೆ ಇತರೆ ಹುಡುಗರಂತೆ ಇರಬಾರದು? ಎಂದೆನಿಸಿತ್ತು" ಎಂದು ತಮ್ಮ ಕಷ್ಟದ ದಿನಗಳನ್ನು ನೆನಪಿಸಿಕೊಂಡರು.