'ಕಪಟಿ' ಕನ್ನಡದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಸುಕೃತಾ ವಾಗ್ಲೆ, ದೇವ್ ದೇವಯ್ಯ, ಸಾತ್ವಿಕ್ ಕೃಷ್ಣನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ 'ಕಪಟಿ' ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ. ಕಳೆದ ದಿನ ಅನಾವರಣಗೊಂಡಿರುವ ಟೀಸರ್ ಸಿನಿಮಾ ವೀಕ್ಷಿಸುವ ಕುತೂಹಲವನ್ನು ಹೆಚ್ಚಿಸಿದೆ.
ದಯಾಳ್ ಪದ್ಮನಾಭನ್ ನಿರ್ಮಾಣದ ಈ ಚಿತ್ರಕ್ಕೆ ರವಿಕಿರಣ್ ಹಾಗೂ ಚೇತನ್ ಎಸ್ಪಿ ಅವರ ಜಂಟಿ ನಿರ್ದೇಶನವಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಕನ್ನಡದ ಜನಪ್ರಿಯ ನಟ ಡಾರ್ಲಿಂಗ್ ಕೃಷ್ಣ ಸಾಕ್ಷಿಯಾದರು. 'ಕಪಟಿ' ಟೀಸರ್ ಅನಾವರಣಗೊಳಿಸಿದ ಲವ್ ಮಾಕ್ಟೇಲ್ ನಟ ಇಡೀ ಚಿತ್ರತಂಡಕ್ಕೆ ಶುಭ ಕೋರಿದರು.
ನಿರ್ಮಾಪಕ ದಯಾಳ್ ಪದ್ಮನಾಭನ್ ಮಾತನಾಡಿ, ಇದು ನಮ್ಮ ಡಿ ಪಿಕ್ಚರ್ಸ್ ಲಾಂಛನದಲ್ಲಿ ನಿರ್ಮಾಣ ಆಗಿರುವ 12ನೇ ಚಿತ್ರ. ಹನ್ನೆರಡು ಚಿತ್ರಗಳಲ್ಲಿ 10 ಕನ್ನಡ ಹಾಗೂ 2 ತಮಿಳು ಸಿನಿಮಾಗಳು. 11 ಚಿತ್ರಗಳನ್ನು ನಾನೇ ನಿರ್ಮಿಸಿ , ನಿರ್ದೇಶನವನ್ನೂ ಮಾಡಿದ್ದೇನೆ. ಆದರೆ, ಈ ಚಿತ್ರವನ್ನು ನಾನು ನಿರ್ಮಾಣ ಮಾತ್ರ ಮಾಡಿದ್ದೇನೆ. ರವಿಕಿರಣ್ ಹಾಗೂ ಚೇತನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇವರು ಬಂದು ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ನಿರ್ಮಾಣಕ್ಕೆ ಮುಂದಾದೆ. ಡಾರ್ಕ್ ನೆಟ್ ಕಥಾಹಂದರವನ್ನು ಈ ಚಿತ್ರ ಹೊಂದಿದೆ. ಕನ್ನಡದಲ್ಲಿ ಗುಲ್ಟು ಚಿತ್ರದ ನಂತರ ಈ ಜಾನರ್ನ ಚಿತ್ರ ಬಂದಿರಲಿಲ್ಲ. ಇನ್ನೂ, ಕಂಟೆಂಟ್ ಓರಿಯಂಟೆಡ್ ಚಿತ್ರಗಳಿಂದ ಯಾವತ್ತೂ, ಯಾರಿಗೂ ನಷ್ಟವಾಗಲ್ಲ ಎಂದು ನಂಬಿರುವವನು ನಾನು. ಆದರೆ, ಸ್ವಲ್ಪ ತಾಳ್ಮೆ ಇರಬೇಕು ಅಷ್ಟೇ. ಅದಕ್ಕೆ ಉದಾಹರಣೆ ನನ್ನ ಚಿತ್ರಗಳು. 'ಕಪಟಿ'ಯನ್ನು ಇತ್ತೀಚೆಗೆ ಸ್ನೇಹಿತರ ಜೊತೆ ವೀಕ್ಷಿಸಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆ ಎಂದು ಮಾಹಿತಿ ಹಂಚಿಕೊಂಡರು.
ನಟಿ ಸುಕೃತಾ ವಾಗ್ಲೆ ಮಾತನಾಡಿ, ನಾನು ಚಿತ್ರರಂಗವನ್ನು ಬಿಟ್ಟು ಉಡುಪಿಯಲ್ಲಿ ನೆಲೆಸಿದ್ದೆ. ನಿರ್ದೇಶಕರು ಹೇಳಿದ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡು ಬಹುದಿನಗಳ ನಂತರ ಮತ್ತೆ ನಟಿಸಿದ್ದೇನೆ. ಈ ಚಿತ್ರದಲ್ಲಿ ನನ್ನ ಪಾತ್ರ ವಿಭಿನ್ನವಾಗಿದೆ. ಈ ಪಾತ್ರ ಎಲ್ಲರಿಗೂ ಇಷ್ಟ ಆಗಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.