ಉಡುಪಿ: ಶುಕ್ರವಾರದಂದು 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತರ ಹೆಸರು ಘೋಷಣೆ ಆಗಿದೆ. 2022ರ ಭಾರತೀಯ ಚಿತ್ರರಂಗದಲ್ಲಿನ ಸಾಧನೆಗಳನ್ನು ಪರಿಗಣಿಸಿ ಈ ಪ್ರತಿಷ್ಠಿತ ಪ್ರಶಸ್ತಿಗಳಿಗೆ ವಿಜೇತರನ್ನು ಆಯ್ಕೆ ಮಾಡಲಾಗಿದೆ. ನಮ್ಮ ಕನ್ನಡ ಚಿತ್ರರಂಗದ ಕಾಂತಾರ, ಕೆಜಿಎಫ್ 2, ಮಧ್ಯಂತರ ಸಿನಿಮಾಗಳು ಗೆಲುವಿನ ನಗೆ ಬೀರಿವೆ. ನಿರೀಕ್ಷೆಯಂತೆ ಸ್ಯಾಂಡಲ್ವುಡ್ನ ಬ್ಲಾಕ್ಬಸ್ಟರ್ 'ಕಾಂತಾರ' ದೊಡ್ಡ ಮಟ್ಟಿನ ಸಾಧನೆ ಮಾಡಿದೆ.
2022ರ ಸೆಪ್ಟೆಂಬರ್ 30ರಂದು ಚಿತ್ರಮಂದಿರ ಪ್ರವೇಶಿಸಿ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡ 'ಕಾಂತಾರ' ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪೈಕಿ 'ಅತ್ಯುತ್ತಮ ನಟ' ಹಾಗೂ ಅತ್ಯುತ್ತಮ 'ಮನರಂಜನಾ ಚಿತ್ರ' ಗೌರವಕ್ಕೆ ಪಾತ್ರವಾಗಿದೆ. ಈ ಬಗ್ಗೆ ರಿಷಬ್ ಸೇರಿದಂತೆ ಸಂಪೂರ್ಣ ಚಿತ್ರತಂಡ, ಸ್ಯಾಂಡಲ್ವುಡ್ ಖ್ಯಾತನಾಮರು ಹಾಗೂ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರದಲ್ಲಿ ನಾಯಕ ನಟ ರಿಷಬ್ ಶೆಟ್ಟಿ (ಶಿವ) ಅವರ ತಾಯಿಯ ಪಾತ್ರ ನಿರ್ವಹಿಸಿದ್ದ ಮಾನಸಿ ಸುಧೀರ್ ಈಟಿವಿ ಭಾರತ ಜೊತೆ ಸಂತಸ ಹಂಚಿಕೊಂಡಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ನಟಿ ಮಾನಸಿ ಸುಧೀರ್, ವರಮಹಾಲಕ್ಷ್ಮಿ ಹಬ್ಬದಂದು ನಮ್ಮ ಚಿತ್ರಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿರುವುದು ತುಂಬಾನೇ ಖುಷಿ ಕೊಟ್ಟಿದೆ. ನಮ್ಮ ಚಿತ್ರಕ್ಕೆ 'ಅತ್ಯುತ್ತಮ ನಟ' ಹಾಗೂ ಅತ್ಯುತ್ತಮ 'ಮನರಂಜನಾ ಚಿತ್ರ' ಪ್ರಶಸ್ತಿಗಳು ಲಭಿಸಿರುವುದು ಬಹಳ ಸಂತಸದ ವಿಚಾರ. ನನಗೇನೆ ಪ್ರಶಸ್ತಿ ಬಂದಿರುವಷ್ಟು ಖುಷಿ ಆಗುತ್ತಿದೆ. ಏಕಂದ್ರೆ ಕಾಂತಾರದಲ್ಲಿ ನಾನೂ ಕೂಡಾ ಭಾಗಿಯಾಗಿದ್ದೆ. ರಿಷಬ್ ಸರ್ಗೆ ಅಭಿನಂದನೆ ಜೊತೆಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೊತೆಗೆ, ಚಿತ್ರಕ್ಕೆ ಶ್ರಮ ಹಾಕಿರುವ ಪ್ರತಿಯೊಬ್ಬರಿಗೆ ಮತ್ತು ಹೊಂಬಾಳೆ ಫಿಲ್ಮ್ಸ್ಗೂ ಕೃತಜ್ಞತೆ ಜೊತೆಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.