ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸ್ಟಾರ್ಡಮ್ ಹೊಂದಿರೋ ಪೃಥ್ವಿ ಅಂಬಾರ್ ಒಂದರ ಹಿಂದೊಂದರಂತೆ ವಿಶಿಷ್ಠ ಸಿನಿಮಾಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅವರ ಬಹುನಿರೀಕ್ಷಿತ ಸಿನಿಮಾವೊಂದು ಬಿಡುಗಡೆಗೆ ಸಜ್ಜಾಗಿದೆ. ಅದುವೆ 'ಜೂನಿ'. ಶೀರ್ಷಿಕೆಯಿಂದಲೇ ಗಮನ ಸೆಳೆಯುತ್ತಿರುವ ಈ ಚಿತ್ರದ ಟ್ರೇಲರ್ ಅನ್ನು ಇತ್ತೀಚೆಗೆ ಅನಾವರಣಗೊಳಿಸಲಾಗಿದೆ. ಈವೆಂಟ್ನಲ್ಲಿ, ಚಿತ್ರತಂಡ 'ಜೂನಿ' ಬಗ್ಗೆ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಾಯಕ ನಟ ಪೃಥ್ವಿ ಅಂಬಾರ್ ಮಾತನಾಡಿ, ವೈಭವ್ ಮಹಾದೇವ್ ಎಷ್ಟು ಕ್ಲಾರಿಟಿಯಾಗಿ ಮಾತನಾಡಿದ್ದರೋ, ಅಷ್ಟೇ ಕ್ಲಾರಿಟಿಯಾಗಿ ಸಿನಿಮಾ ಮಾಡಿದ್ದಾರೆ. ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಬುದ್ಧಿವಂತಿಕೆ, ಅನುಭವದಲ್ಲಿ ಬಹಳ ದೊಡ್ಡವರು. ಈ ಚಿತ್ರತಂಡವನ್ನು ಕ್ರಿಕೆಟ್ ಟೀಂ ಎಂದುಕೊಂಡರೆ ಅತಿ ಹೆಚ್ಚು ಸ್ಕೋರ್ ಮಾಡುವವರು ವೈಭವ್. ಅವರಷ್ಟೇ ಸ್ಕೋರ್ ಮಾಡುವವರು ರಿಷಿಕಾ. ಎರಡೂವರೆ ತಿಂಗಳ ಕಾಲ ಬಹಳಷ್ಟು ರಿಹರ್ಸಲ್ ಮಾಡಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಬೇಕು ಎಂದು ಬಹಳ ಶ್ರದ್ಧೆಯಿಂದ ಚಿತ್ರ ಮಾಡಿದ್ದಾರೆ. ನನ್ನದು ಈ ಚಿತ್ರದಲ್ಲಿ ಶೇ.50ರಷ್ಟು ಪರಿಶ್ರಮ ಅಷ್ಟೇ ಇರುವುದು. ಎಲ್ಲರದ್ದೂ ಶೇ.100ರಷ್ಟು ಇದೆ ಎಂದು ತಿಳಿಸಿದರು.
ನಾಯಕ ನಟಿ ರಿಷಿಕಾ ಮಾತನಾಡಿ, ನಾವು 2022ರಲ್ಲಿ ಈ ಚಿತ್ರದ ಶೂಟಿಂಗ್ ಶುರು ಮಾಡಿದೆವು. ಆ ಸಮಯದಲ್ಲಿ ನನಗೆ ಇದು ಎರಡನೇ ಪ್ರಾಜೆಕ್ಟ್. ನನಗೆ ಈ ರೀತಿಯ ವಿಭಿನ್ನ ಪಾತ್ರ ಸಿಕ್ಕಿದ್ದು, ಬಹಳ ಖುಷಿ ಕೊಟ್ಟಿತ್ತು. ಬಹಳಾನೇ ರಿಹರ್ಸಲ್ ಮಾಡಿದ್ದೇವೆ. ಇದು ನನ್ನ ಒಬ್ಬಳ ಪ್ರಯತ್ನವಲ್ಲ. ಇಡೀ ತಂಡದ ಪ್ರಯತ್ನ. ಈ ಚಿತ್ರದಲ್ಲಿ ಒಂದೊಳ್ಳೆ ಸಂದೇಶ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಸಾಗುವ ಸಿನಿಮಾ ಇದಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಸಾಗುವ ಸಿನಿಮಾ:ನಿರ್ದೇಶಕ ವೈಭವ್ ಮಹಾದೇವ್ ಮಾತನಾಡಿ, ಜೂನಿ ಕಥೆ ಮೇಲೆ ಬಹಳ ನಂಬಿಕೆ ಇದೆ. ಆ ಕಥೆ ಮೇಲೆ ಇರುವ ನಂಬಿಕೆಯಿಂದಲೇ ನಾವಿಲ್ಲಿ ಕುಳಿತುಕೊಂಡಿದ್ದೇವೆ. ನಾನೊಂದು ಕಥೆಯನ್ನು ಜನರಿಗೆ ಹೇಳುತ್ತಿದ್ದೇನೆ. ಅದನ್ನು ಕೋಟ್ಯಂತರ ಕನ್ನಡಿಗರ ಮುಂದೆ ಇಡಬೇಕು ಎಂದರೆ ಅದಕ್ಕೆ ಲಕ್, ಹಾರ್ಡ್ ವರ್ಕ್ ಎಲ್ಲವೂ ಬೇಕು. ಈ ಚಿತ್ರ ಮಾಡಿರುವುದಕ್ಕೆ ನನಗೂ ತೃಪ್ತಿ ಇದೆ. ಸ್ಪ್ಲಿಟ್ ಪರ್ಸನಾಲಿಟಿ ಸುತ್ತ ಇಡೀ ಸಿನಿಮಾ ಸಾಗುತ್ತದೆ. ಜನಕ್ಕೆ ಈ ಕಂಡೀಷನ್ ಬಗ್ಗೆ ಅರ್ಥ ಮಾಡಿಸಬೇಕು ಅನ್ನೋದು ನನ್ನ ಪ್ರಯತ್ನ ಎಂದರು.