ಇಂದು ಬೆಳಗಿನ ಜಾವ ಬಾಲಿವುಡ್ ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಅವರ ಮುಂಬೈ ನಿವಾಸಕ್ಕೆ ನುಗ್ಗಿದ ವ್ಯಕ್ತಿಯೊಂದಿಗೆ ನಡೆದ ಘರ್ಷಣೆಯಲ್ಲಿ ನಟ ಗಾಯಗೊಂಡಿದ್ದಾರೆ. ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೈಫ್ ಮೇಲೆ ಹಲ್ಲೆ ನಡೆದ ಸುದ್ದಿ ಹೊರಬಿದ್ದ ಕೂಡಲೇ, ಹಲವು ಸೆಲೆಬ್ರಿಟಿಗಳು ಪ್ರತಿಕ್ರಿಯಿಸಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಸೌತ್ ಸೂಪರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಅವರು ಸಾಮಾಜಿಕ ಜಾಲತಾಣದ ಮೂಲಕ ಸೈಫ್ ಮೇಲಿನ ದಾಳಿ ವಿಷಯ ಕೇಳಿದಾಗ ಆದ ಶಾಕ್ ಅನ್ನು ವ್ಯಕ್ತಪಡಿಸಿದ್ದಾರೆ. 'ದೇವರ' ಚಿತ್ರದಲ್ಲಿ ಸಹಕರಿಸಿದ್ದ ಸೈಫ್ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ. ಜೂನಿಯರ್ ಎನ್‌ಟಿಆರ್ ತಮ್ಮ ಅಧಿಕೃತ ಎಕ್ಸ್ನಲ್ಲಿ, "ಸೈಫ್ ಸರ್ ಮೇಲಿನ ದಾಳಿ ಬಗ್ಗೆ ಕೇಳಿ ಆಘಾತದ ಜೊತೆಗೆ ದುಃಖವಾಯಿತು. ಅವರು ಶೀಘ್ರ ಚೇತರಿಸಿಕೊಳ್ಳಲಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ದಕ್ಷಿಣ ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರೂ ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ಸೈಫ್ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ದುರಂತದ ಬಗ್ಗೆ ಪ್ರತಿಕ್ರಿಯಿಸಿದ ಖ್ಯಾತ ನಟ, "ಸೈಫ್ ಅಲಿ ಖಾನ್ ಮೇಲಿನ ದಾಳಿ ಸುದ್ದಿ ಕೇಳಿ ತೀವ್ರ ವಿಚಲಿತನಾಗಿದ್ದೇನೆ. ಅವರು ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಮತ್ತು ಪ್ರಾರ್ಥಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.
ಬುಧವಾರ ಮಧ್ಯರಾತ್ರಿ ಮುಂಬೈನಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸದೊಳಗೆ ನುಗ್ಗಿದ ವ್ಯಕ್ತಿಯೋರ್ವ ನಟನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಪರಿಣಾಮ ನಟನ ಮೈಮೇಲೆ ಹಲವು ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ನಂತರ 54ರ ಹರೆಯದ ನಟನನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿಸಿದ್ದಾರೆ. ಬಾಂದ್ರಾ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.