ಕನ್ನಡ ಹಾಗೂ ಬಹುಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ನಟ ಕಿಚ್ಚ ಸುದೀಪ್. ಸದ್ಯ 'ಮ್ಯಾಕ್ಸ್' ಸಲುವಾಗಿ ಸುದ್ದಿಯಲ್ಲಿದ್ದಾರೆ. ನಟನೆ, ನಿರ್ದೇಶನ, ನಿರ್ಮಾಣ, ಗಾಯನ, ನಿರೂಪಣೆ, ಕ್ರಿಕೆಟ್, ಅಡುಗೆ ಹೀಗೆ ಕಿಚ್ಚನಲ್ಲಿರುವ ಮಲ್ಟಿ ಟ್ಯಾಲೆಂಟ್ಸ್ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸೆಳೆದಿದೆ.
'ಮ್ಯಾಕ್ಸ್' ಸಿನಿಮಾ ಬಿಡುಗಡೆಯನ್ನು ಎದುರು ನೋಡುತ್ತಿರುವ ಸುದೀಪ್ ಇತ್ತೀಚೆಗಷ್ಟೇ 'ಗೌರಿ' ಟ್ರೇಲರ್ ರಿಲೀಸ್ ಈವೆಂಟ್ನಲ್ಲಿ ಭಾಗಿಯಾಗಿದ್ದರು. ಈ ಮೂಲಕ ಹಲವು ವರ್ಷಗಳ ಗೆಳೆಯ ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾಗೆ ಸಾಥ್ ನೀಡಿದ್ದಾರೆ. ಇಂದ್ರಜಿತ್ ಗೌರಿ ಚಿತ್ರದ ಮೂಲಕ ಮಗ ಸಮರ್ಜಿತ್ ಲಂಕೇಶ್ ಅವರನ್ನು ಸ್ಯಾಂಡಲ್ವುಡ್ಗೆ ಪರಿಚಯಿಸುತ್ತಿದ್ದಾರೆ.
ವರಮಹಾಲಕ್ಷ್ಮೀ ಹಬ್ಬದ ಹಿಂದಿನ ದಿನ ತೆರೆ ಕಾಣುತ್ತಿರುವ 'ಗೌರಿ' ಟ್ರೇಲರ್ ಅನಾವರಣಗೊಳಿಸಿ ಮಾತನಾಡಿದ ಸುದೀಪ್, ಇಂದ್ರಜಿತ್ ಮತ್ತು ನಾನು ಹಳೇ ಸ್ನೇಹಿತರು. ನಾವು ಬ್ಯಾಡ್ಮಿಂಟನ್ ಆಡುತ್ತಿದ್ದೆವು. ಆಗ ಇಂದ್ರಜಿತ್ ಅವರು ಲಂಕೇಶ್ ಅವರ ಮಗ ಎಂಬುದು ನನಗೆ ಗೊತ್ತಿರಲಿಲ್ಲ. ಆದ್ರೆ ಬಹಳ ಚೆನ್ನಾಗಿ ಆಟ ಆಡೋರು. ಇಂದು ತಂದೆ-ಮಗನಿಗೆ ಆಗುವಷ್ಟು ಸಂತೋಷ ಈ ಪ್ರಪಂಚದಲ್ಲಿ ಬೇರೆ ಯಾರಿಗೂ ಆಗಲು ಸಾಧ್ಯವೇ ಇಲ್ಲ. ಸಮರ್ಜಿತ್ನ ಯಶಸ್ಸು ಅವರೊಬ್ಬರ ಯಶಸ್ಸಾಗಿರುವುದಿಲ್ಲ. ಅದರಲ್ಲಿ ಇಂದ್ರಜಿತ್ ಯಶಸ್ಸೂ ಇದೆ. ಇನ್ನೂ ಸಾನ್ಯ ಅವರು ಉತ್ತಮ ನಟಿ ಅಷ್ಟೇ ಅಲ್ಲ, ಒಳ್ಳೆಯ ಬರಹಗಾರ್ತಿ ಕೂಡ ಹೌದು. ಈ ವಿಚಾರ ನನಗೆ ಬಿಗ್ ಬಾಸ್ ಸಮಯದಲ್ಲಿ ತಿಳಿಯಿತು'' ಎಂದು ತಿಳಿಸಿದರು.
ಇಂದ್ರಜಿತ್ ಲಂಕೇಶ್ ಫ್ಯಾಷನೇಟ್ ನಿರ್ದೇಶಕ. ಹೊಸ ಹೊಸ ಹೀರೋಯಿನ್ಗಳನ್ನು ಪರಿಚಯಿಸುವುದರಲ್ಲಿ ಮೊದಲಿಗರು. ಸಿನಿಮಾ ಕೂಡಾ ಅಷ್ಟೇ ಚೆನ್ನಾಗಿ ಮಾಡುತ್ತಾರೆ. ನಾನು ಅವರ ತುಂಟಾಟ ಚಿತ್ರದ ಹಾಡೊಂದರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಅವರ ಡೆಡಿಕೇಷನ್ ಇಷ್ಟ ಆಗಿತ್ತು. ನಾವಿಬ್ಬರೂ ಬ್ಯಾಡ್ಮಿಂಟನ್ ಜೊತೆಗೆ ಸಿನಿಮಾ ಗೆಳೆಯರಾದೆವು. ಬಹು ವರ್ಷದ ಸ್ನೇಹ ಇದು. ಅವರ ಬಗ್ಗೆ ಸಖತ್ ಕ್ಯೂರಿಯಾಸಿಟಿಯ ವಿಷಯಗಳಿವೆ. ಆದ್ರೆ ಹೇಳಲು ಆಗೋಲ್ಲ ಎಂದು ಸುದೀಪ್ ತಮಾಷೆ ಮಾಡಿದರು.