ಕನ್ನಡ ಚಿತ್ರರಂಗ ಮಾತ್ರವಲ್ಲದೇ, ಹಾಲಿವುಡ್ ಅಂಗಳದಲ್ಲೂ ತಮ್ಮದೇ ಆದ ವಿಭಿನ್ನ ಮ್ಯೂಸಿಕ್ನಿಂದ ಜನಪ್ರಿಯರಾಗಿರುವ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ಮತ್ತೊಮ್ಮೆ ವಿಮಾನಯಾನ ಸಂದರ್ಭ ಸಮಸ್ಯೆ ಎದುರಿಸಿದ್ದಾರೆ.
ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಜನಪ್ರಿಯ ಭಾರತೀಯ-ಅಮೆರಿಕನ್ ಸಂಯೋಜಕ ರಿಕಿ ಕೇಜ್, ಏರ್ ಇಂಡಿಯಾ ಸಂಸ್ಥೆ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಬ್ಯುಸಿನೆಸ್ ಕ್ಲಾಸ್‌ನಿಂದ ಕೆಳಗಿಳಿಸಿ, ಮರುಪಾವತಿ ಮಾಡಲು ನಿರಾಕರಿಸಿದ್ದಕ್ಕಾಗಿ ಸಾರ್ವಜನಿಕವಾಗಿ ಏರ್ ಇಂಡಿಯಾ ಸಂಸ್ಥೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸೂಕ್ತ ಸ್ಪಷ್ಟೀಕರಣ ಒದಗಿಸದ ಏರ್‌ಲೈನ್‌ನೊಂದಿಗೆ ಇಂತಹ ಸಮಸ್ಯೆಯನ್ನು ಎದುರಿಸುತ್ತಿರುವುದು ಕಳೆದ ಒಂದು ವರ್ಷದಲ್ಲಿ ಇದು ಮೂರನೇ ಬಾರಿ ಎಂದು ಹೇಳಿಕೊಂಡಿದ್ದಾರೆ.
ರಿಕಿ ಕೇಜ್ ಟ್ವೀಟ್ಗಳಿವು: ''ವ್ಹಾವ್, ಕಳೆದ ಒಂದು ವರ್ಷದಲ್ಲಿ ನನಗಿದು ಮೂರನೇ ಅನುಭವ. ಮುಂಬೈನಿಂದ ಬೆಂಗಳೂರಿಗೆ ಪ್ರಯಾಣಿಸಲು ಏರ್ ಇಂಡಿಯಾದಲ್ಲಿ, ಬ್ಯುಸಿನೆಸ್ ಕ್ಲಾಸ್ ಟಿಕೆಟ್ ಅನ್ನು ಬುಕ್ ಮಾಡಿ, ಹಣ ಪಾವತಿಸಿದ್ದೆ. ದ್ವಾರ ತಲುಪುತ್ತಿದ್ದಂತೆ, ಸಿಬ್ಬಂದಿ ನನ್ನನ್ನು ಕೆಳದರ್ಜೆಗೆ ಇಳಿಸಿದ್ದಾರೆ ಮತ್ತು ಇದಕ್ಕೆ ಯಾವುದೇ ಕಾರಣ ಕೊಡದೇ ಬಹಳ ರೂಡ್ ಆಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಅವರು ನನಗೆ ಮರುಪಾವತಿಯನ್ನು ಸಹ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ. ಏರ್ ಇಂಡಿಯಾಗೆ ಏನಾಗಿದೆ?. ಕೌಂಟರ್‌ನಲ್ಲಿದ್ದ ನಿಶಿತಾ ಸಿಂಗ್ ಸಭ್ಯವಾಗಿ ವರ್ತಿಸಲಿಲ್ಲ. ನಿಜವಾಗಿಯೂ, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆ ಸಂಸ್ಥೆ ಉತ್ತಮ (ಮೊದಲ ಸ್ಥಾನದಲ್ಲಿ) ವಿಮಾನಯಾನವನ್ನು ನಡೆಸುವ ಸಾಮರ್ಥ್ಯವನ್ನು ಹೊಂದಿದೆಯೇ ಎಂಬುದನ್ನು ನೋಡಬೇಕು. ನಾನು ಪ್ರಸ್ತುತ ನಿರ್ಗಮನ ದ್ವಾರದಲ್ಲಿದ್ದೇನೆ. 9.25ಕ್ಕೆ ವಿಮಾನ ಟೇಕಾಫ್ ಆಗಲಿದೆ'' ಎಂದು ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದರು.