ಭಾರತೀಯ ಚಿತ್ರರಂಗದಲ್ಲಿ ದೇಶಪ್ರೇಮ ಆಧಾರಿತ ಸಾಕಷ್ಟು ಸಿನಿಮಾಗಳು ಮೂಡಿಬಂದಿವೆ. ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಘಟನೆಗಳಿಂದ ಹಿಡಿದು, ಸ್ವಾತಂತ್ರ್ಯ ನಂತರ ನಡೆದ ಯುದ್ಧಗಳ ಮೇಲೂ ಸಿನಿಮಾಗಳಿವೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲೂ ದೇಶ ಪ್ರೇಮ ಸಾರುವ ಹಲವು ಸಿನಿಮಾಗಳು ಸದ್ದು ಮಾಡಿವೆ. 78ನೇ ಸ್ವಾತಂತ್ರ್ಯ ದಿನದ ಅಂಗವಾಗಿ, ಕನ್ನಡದಲ್ಲಿ ದೇಶಪ್ರೇಮ ಸಾರುವ ಚಿತ್ರಗಳ ಕುರಿತ ಒಂದು ಮೆಲುಕು ನೋಟ ಇಲ್ಲಿದೆ.
ಕಿತ್ತೂರು ಚೆನ್ನಮ್ಮ: 1961ರಲ್ಲಿ ತೆರೆಕಂಡು ಇಂದಿಗೂ ಪ್ರೇಕ್ಷಕರ ಮನದಲ್ಲಿ ಅಚ್ಚಳಿಯದೇ ಉಳಿದಿರುವ ಸಿನಿಮಾ 'ಕಿತ್ತೂರು ಚೆನ್ನಮ್ಮ'. ಬಹುಭಾಷಾ ನಟಿ ಬಿ.ಸರೋಜಾದೇವಿ ಕಿತ್ತೂರು ಚೆನ್ನಮ್ಮನಾಗಿ ಅಭಿನಯಿಸಿದ ಚಿತ್ರವಿದು. ಈ ಚಿತ್ರದಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಕಾಯ್ದೆಯಡಿ ಬ್ರಿಟಿಷರು ಕಿತ್ತೂರು ಸಂಸ್ಥಾನವನ್ನು ವಶಪಡಿಸಿಕೊಳ್ಳಲು ಬಂದಾಗ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮಳ ಕಥೆಯನ್ನು ಹೇಳಲಾಗಿದೆ. ವಿಶೇಷ ಪಾತ್ರದಲ್ಲಿ ಡಾ. ರಾಜ್ಕುಮಾರ್ ಕೂಡ ನಟಿಸಿದ್ದರು. ಖ್ಯಾತ ನಿರ್ದೇಶಕ ಬಿ.ಆರ್ ಪಂತಲ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಚಿತ್ರಕ್ಕೆ 9ನೇ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಮುತ್ತಿನ ಹಾರ: ಈ ಚಿತ್ರದ ಬಳಿಕ ತೆರೆಕಂಡ ದೇಶಪ್ರೇಮ ಕುರಿತಾದ ಮತ್ತೊಂದು ಸಿನಿಮಾ 'ಮುತ್ತಿನ ಹಾರ'. ಈ ಚಿತ್ರದಲ್ಲಿ ಡಾ.ವಿಷ್ಣುವರ್ಧನ್ ವೀರ ಸೈನಿಕನ ಪಾತ್ರದಲ್ಲಿ ವಿಜೃಂಭಿಸಿದ್ದು, ಸುಹಾಸಿನಿ ನಾಯಕಿಯಾಗಿದ್ದರು. ಕೊಡಗಿನ ವೀರ ಸೈನಿಕ ಅಚ್ಚಪ್ಪನ ಸಾಹಸ ಶೌರ್ಯ ಮತ್ತು ಸುಂದರ ದಾಂಪತ್ಯದ ಜೊತೆಗೆ ಯುದ್ಧದ ಸನ್ನಿವೇಶವನ್ನ ಈ ಚಿತ್ರದಲ್ಲಿ ತೋರಿಸಲಾಗಿದೆ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣ ಕೂಡ ಮಾಡಿದ್ದರು. ಯುದ್ಧದ ಇನ್ನೊಂದು ಮುಖವನ್ನು ತೆರೆದಿಟ್ಟ ಈ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಈ ಸಿನಿಮಾ 1990ರಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು.
ತಾಯಿ ಸಾಹೇಬ: ಅಪ್ಪಾ ಸಾಹೇಬ ಎಂಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ಅವರ ಎರಡನೇ ಹೆಂಡತಿ ನರ್ಮದಾ ತಾಯಿಯವರ ಜೀವನದ ಕಥೆಯನ್ನು ಆಧರಿಸಿ ಬಂದ ಮಗದೊಂದು ಕನ್ನಡ ಸಿನಿಮಾ 'ತಾಯಿ ಸಾಹೇಬ'. ಖ್ಯಾತ ನಟಿ ಜಯಮಾಲಾ ಹಾಗೂ ಸುರೇಶ್ ಹೆಬ್ಳೀಕರ್ ಅಭಿನಯದ ಈ ಸಿನಿಮಾ ಸ್ವಾತಂತ್ರ್ಯ ಪೂರ್ವ ಹಾಗೂ ಭೂಚಳವಳಿ ಬಗ್ಗೆ ವಿವರಿಸಿದೆ. ಗಿರೀಶ್ ಕಾಸವರಳ್ಳಿ ನಿರ್ದೇಶನದ ಈ ಚಿತ್ರವು ಡಿಸೆಂಬರ್ 31, 1997ರಲ್ಲಿ ತೆರೆ ಕಂಡಿತ್ತು. ಪ್ರೇಕ್ಷಕರ ಮೆಚ್ಚುಗೆಗೆ ಈ ಚಿತ್ರ ಪಾತ್ರವಾಗಿತ್ತು.
ವೀರಪ್ಪನಾಯ್ಕ: ಮುತ್ತಿನ ಹಾರ ಚಿತ್ರದ ಬಳಿಕ ವಿಷ್ಣುವರ್ಧನ್ ಮತ್ತೆ ದೇಶ ಪ್ರೇಮಿಯಾಗಿ ಅಭಿನಯಿಸಿದ ಚಿತ್ರ 'ವೀರಪ್ಪನಾಯ್ಕ'. ಬೆಳಗಾವಿ ಹತ್ತಿರದ ಹಳ್ಳಿಯಲ್ಲಿ ವಾಸಿಸುವ ಒಬ್ಬ ದೇಶಪ್ರೇಮಿ ಹಾಗೂ ಗಾಂಧಿವಾದಿ ನಾಯಕನ ಜೀವನದ ಕಥೆಯನ್ನು ಈ ಚಿತ್ರ ಒಳಗೊಂಡಿತ್ತು. ಸಂಬಂಧಗಳಿಗಿಂತ ದೇಶಪ್ರೇಮವೇ ಹೆಚ್ಚೆಂದು ಉಗ್ರಗ್ರಾಮಿಯಾದ ತನ್ನ ಮಗನನ್ನೇ ಕೊಲ್ಲುವ ಅಪ್ಟಟ ದೇಶಾಭಿಮಾನಿಯ ಕಥೆ ಇದು. ದೇಶಕ್ಕೋಸ್ಕರ ಮಗನನ್ನೇ ವಿಷ್ಣುರ್ಧನ್ ಅವರು ಈ ಚಿತ್ರದಲ್ಲಿ ಕೊಲೆ ಮಾಡುವುದನ್ನು ಊಹಿಸಲೂ ಅಸಾಧ್ಯ. ವಿಷ್ಣುವರ್ಧನ್ ಪತ್ನಿ ಪಾತ್ರದಲ್ಲಿ ಶೃತಿ ನಟಿಸಿದ್ದರು. ಎಸ್.ನಾರಾಯಣ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. 1999ರಲ್ಲಿ ಬಿಡುಗಡೆಯಾದ ಈ ಚಿತ್ರ ಯಶಸ್ವಿ ನೂರು ದಿನಗಳನ್ನು ಪೂರೈಸಿತ್ತು.
ಹಗಲು ವೇಷ: ಲವರ್ ಬಾಯ್ ಹಾಗೂ ಹಳ್ಳಿ ಹುಡುಗನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ 'ಹಗಲು ವೇಷ' ಸಿನಿಮಾದಲ್ಲಿ ದೇಶಪ್ರೇಮಿಯ ಪಾತ್ರದಲ್ಲಿ ಮಿಂಚಿದ್ದರು. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಹಗಲುವೇಷ ಚಿತ್ರ ಬ್ರಿಟಿಷ್ ಆಳ್ವಿಕೆ ವಿರುದ್ಧ ದಂಗೆಯೇಳುವ ಸ್ವಾತಂತ್ರ್ಯ ಹೋರಾಟಗಾರನ ಕಥೆ ಆಧರಿಸಿದೆ. ಚಿತ್ರದಲ್ಲಿ ಶಿವರಾಜ್ಕುಮಾರ್ ಬ್ರಿಟಿಷರ ವಿರುದ್ಧ ಹೋರಾಟ ಮಾಡುವ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮಾರ್ಚ್ 24, 2000ರಲ್ಲಿ ಬಿಡುಗಡೆಯಾಗಿದ್ದ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು.