ವಿಜಯವಾಡ (ಆಂಧ್ರಪ್ರದೇಶ): ಮುಂಬೈ ಮೂಲದ ನಟಿ ಕಾದಂಬರಿ ಜೇತ್ವಾನಿ ಅವರನ್ನು ಅಕ್ರಮವಾಗಿ ಬಂಧಿಸಿದ್ದು ಮತ್ತು ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಐಪಿಎಸ್ (ಅಮಾನತುಗೊಂಡಿದ್ದಾರೆ) ಅಧಿಕಾರಿಗಳಾದ ಆಂಜನೇಯುಲು, ಕಂಠೀರಣಾ ತಾತಾ ಮತ್ತು ವಿಶಾಲ್ ಗುನ್ನಿ ಅವರನ್ನು ಆರೋಪಿಗಳಾಗಿ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ ಎಂದು ಮೂಲಗಳು ಈಟಿವಿ ಭಾರತ್‌ಗೆ ತಿಳಿಸಿವೆ.
ಮೂವರು ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಬಗ್ಗೆ ರಾಜ್ಯ ಪೊಲೀಸ್ ಅಧಿಕಾರಿಗಳು ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಾನೂನು ಸಲಹೆ ಪಡೆದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ನಟಿಯ ದೂರಿನ ನಂತರ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಸೆಪ್ಟೆಂಬರ್ 13 ರಂದು ನಟಿ ಕಾದಂಬರಿ ಜೇತ್ವಾನಿ ಅವರು ಇಬ್ರಾಹಿಂಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಕುಕ್ಕಲ ವಿದ್ಯಾಸಾಗರ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿ ತನ್ನ ವಿರುದ್ಧದ ನಕಲಿ ದಾಖಲೆಗಳ ಆಧಾರದ ಮೇಲೆ ಸುಳ್ಳು ಪ್ರಕರಣವೊಂದರಲ್ಲಿ ನನ್ನನ್ನು ಬಂಧಿಸಿ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಅಧಿಕಾರಿಗಳು ತಮ್ಮ ಮನೆಯ ಬೀಗಗಳನ್ನು ಅಕ್ರಮವಾಗಿ ಮುರಿದಿದ್ದಾರೆ. ಕೊಲೆ ಬೆದರಿಕೆ ಹಾಕಿದ್ದಾರೆ ಎಂಬುದಾಗಿಯೂ ಆರೋಪಿಸಿದ್ದರು.
ಎಫ್‌ಐಆರ್‌ನಲ್ಲಿ ವಿದ್ಯಾಸಾಗರ್ ಅವರನ್ನು ಪ್ರಮುಖ ಆರೋಪಿ (ಎ1) ಎಂದು ಉಲ್ಲೇಖಿಸಲಾಗಿದೆ. ತನಿಖೆ ನಡೆದಿದ್ದು ಮೂವರು ಐಪಿಎಸ್ ಅಧಿಕಾರಿಗಳು ಕಾನೂನು ಮತ್ತು ನಿಯಮಗಳಿಗೆ ವಿರುದ್ಧವಾಗಿ ವರ್ತಿಸಿದ್ದಾರೆ ಎಂದು ವಿಜಯವಾಡ ಕಮಿಷನರೇಟ್ ಪೊಲೀಸರು ತಿಳಿಸಿದ್ದಾರೆ.