ಚೆನ್ನೈ(ತಮಿಳುನಾಡು):ಹಿರಿಯ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರಿ, ಹಿನ್ನೆಲೆ ಗಾಯಕಿ ಭವತಾರಿಣಿ(47) ಕ್ಯಾನ್ಸರ್‌ನಿಂದ ಗುರುವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಯಕೃತ್ತಿನ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಇವರು ಸೂಕ್ತ ಚಿಕಿತ್ಸೆಗಾಗಿ ಶ್ರೀಲಂಕಾದಲ್ಲಿದ್ದರು.
ಭವತಾರಿಣಿ ಅವರ ಪಾರ್ಥಿವ ಶರೀರವನ್ನು ಇಂದು (ಶುಕ್ರವಾರ, ಜನವರಿ 26) ಚೆನ್ನೈಗೆ ತರಲಾಗುವುದು. ಅಂತಿಮ ವಿಧಿವಿಧಾನಕ್ಕೆ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಭವತಾರಿಣಿ ಪತಿ ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.
ಭವತಾರಿಣಿ 'ಭಾರತಿ' ಚಿತ್ರದ 'ಮಾಯಿಲ್ ಪೋಲ ಪೊನ್ನು ಒನ್ನು' ಗೀತೆಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದರು. ಹಲವು ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದರು.